ʼಆಪರೇಷನ್ ಸಿಂಧೂರ್ʼ ಕುರಿತು ಚರ್ಚಿಸಲು ಕಾಂಗ್ರೆಸ್ ನಿಂದ ಸಿಗದ ಅವಕಾಶ: ಚಿತ್ರಗೀತೆಯ ಸಾಲು ಹಂಚಿಕೊಂಡು ಕುತೂಹಲ ಮೂಡಿಸಿದ ಮನೀಶ್ ತಿವಾರಿ

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ (PTI)
ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳಲ್ಲಿ ನಿನ್ನೆಯಿಂದ (ಸೋಮವಾರ) ಪಹಲ್ಗಾಮ್ ದಾಳಿ ಹಾಗೂ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಈ ವೇಳೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ರಾಜ್ಯಸಭೆಯಲ್ಲಿ ಮಾತನಾಡಲಿರುವ ಕಾಂಗ್ರೆಸ್ ಸದಸ್ಯರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೆಸರಿಲ್ಲದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಜಾಗತಿಕ ವಲಯದ ಗಮನ ಸೆಳೆಯಲು ವಿದೇಶಗಳಿಗೆ ತೆರಳಿದ್ದ ನಿಯೋಗಗಳಲ್ಲಿದ್ದ ಯಾವ ಕಾಂಗ್ರೆಸ್ ಸಂಸದರಿಗೂ ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಚರ್ಚಿಸಲಿರುವ ಸದಸ್ಯರ ಪಟ್ಟಿಯಲ್ಲಿ ಸ್ಥಾನ ದೊರೆಯದಿರುವುದರಿಂದ, ಇದು ಕುತೂಹಲಕ್ಕೆ ಕಾರಣವಾಗಿದೆ.
ಇದರ ಬೆನ್ನಿಗೇ, 1970ರ ಮನೋಜ್ ಕುಮಾರ್ ನಾಯಕತ್ವದ ‘ಪೂರಬ್ ಔರ್ ಪಶ್ಚಿರಮ್’ ಚಿತ್ರದ ಜನಪ್ರಿಯ ಗೀತೆ ‘ಹೈ ಪ್ರೀತ್ ಜಹಾನ್ ಕಿ ರೀತ್ ಸಾದಾ, ಮೈಂ ಗೀತ್ ವಹಾನ್ ಕೆ ಗಾತಾ ಹೂಂ, ಭಾರತ್ ಕ ರೆಹ್ನೆ ವಾಲಾ ಹೂಂ, ಭಾರತ್ ಕಿ ಬಾತ್ ಸುನ್ತಾ ಹೂಂ – ಜೈ ಹಿಂದ್’ ಎಂಬ ಸಾಲುಗಳನ್ನು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಮನೋಜ್ ತಿವಾರಿ ಹಂಚಿಕೊಂಡಿದ್ದಾರೆ. ಆದರೆ, ಈ ಕುರಿತು ಅವರು ಯಾವುದೇ ವಿವರಣೆ ನೀಡದಿರುವುದು ರಾಜಕೀಯ ವಲಯದಲ್ಲಿ ಊಹಾಪೋಹಗಳನ್ನು ಸೃಷ್ಟಿಸಿದೆ.
“ಸರಕಾರದ ಪರವಾಗಿ ಮಾತು: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಚರ್ಚೆಯ ವೇಳೆ ಕಾಂಗ್ರೆಸ್ ಪಕ್ಷವೇಕೆ ಶಶಿ ತರೂರ್ ಹಾಗೂ ಮನೋಜ್ ತಿವಾರಿಗೆ ಮಾತನಾಡುವ ಅವಕಾಶ ನೀಡಿಲ್ಲ?” ಎಂಬ ಶೀರ್ಷಿಕೆ ಹೊಂದಿರುವ ಸುದ್ದಿಯ ತುಣುಕಿನೊಂದಿಗೆ ಎಕ್ಸ್ ನಲ್ಲಿ ಈ ಗೀತೆಯನ್ನು ಮನೋಜ್ ತಿವಾರಿ ಹಂಚಿಕೊಂಡಿದ್ದಾರೆ. ಈ ಸುದ್ದಿಯ ತುಣುಕಿನಲ್ಲಿ “ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಜಾಗತಿಕ ವಲಯಕ್ಕೆ ಮನದಟ್ಟು ಮಾಡಲು ತೆರಳಿದ್ದ ನಿಯೋಗಗಳಲ್ಲಿದ್ದ ಯಾವುದೇ ಸಂಸದರಿಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಮಾತನಾಡುವ ಅವಕಾಶವನ್ನು ಕಾಂಗ್ರೆಸ್ ಪಕ್ಷ ನೀಡಿಲ್ಲ” ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ವಿಷಯದ ಕುರಿತು ಮನೋಜ್ ತಿವಾರಿ ಮತ್ತಾವುದೇ ವಿವರಣೆ ನೀಡಿಲ್ಲ.
ಈ ಕುರಿತು ಸೋಮವಾರ ಸ್ಪಷ್ಟೀಕರಣ ನೀಡಿರುವ ಕಾಂಗ್ರೆಸ್ ಪಕ್ಷ, “ಸಂಸತ್ತಿನಲ್ಲಿ ನಡೆಯಲಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತ ಚರ್ಚೆಯಲ್ಲಿ ನೀವು ಮಾತನಾಡಲು ಬಯಸುತ್ತೀರಾ ಎಂದು ಶಶಿ ತರೂರ್ ಅವರನ್ನು ಪ್ರಶ್ನಿಸಿದಾಗ, ನಾನು ಭಾರತೀಯ ಬಂದರುಗಳ ಮಸೂದೆ, 2025ರ ಕುರಿತು ಮಾತನಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ” ಎಂದು ಹೇಳಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಜಾಗತಿಕ ವಲಯಕ್ಕೆ ಮನವರಿಕೆ ಮಾಡಲು ತೆರಳಿದ್ದ ನಿಯೋಗವೊಂದನ್ನು ಮುನ್ನಡೆಸಿದ್ದ ಶಶಿ ತರೂರ್ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಜಾಗತಿಕ ವೇದಿಕೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದೊಂದಿಗಿನ ಶಶಿ ತರೂರ್ ಸಂಬಂಧ ಹಳಸಿರುವುದರಿಂದ, ಅವರಿಗೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಮಾತನಾಡುವ ಅವಕಾಶ ದೊರೆಯಲಿದೆಯೆ ಎಂಬ ಕುರಿತು ರಾಜಕೀಯ ವಲಯದಲ್ಲಿ ಬಲವಾದ ಊಹಾಪೋಹಗಳು ಹರಡಿದ್ದವು. ಆದರೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಶಶಿ ತರೂರ್ ಹಾಗೂ ಮನೋಜ್ ತಿವಾರಿ ಇಬ್ಬರಿಗೂ ಸಂಸತ್ತಿನಲ್ಲಿ ಈ ಕುರಿತು ಕಾಂಗ್ರೆಸ್ ಪರವಾಗಿ ಚರ್ಚಿಸುವ ಅವಕಾಶ ದೊರೆಯದಿರುವುದು ಮತ್ತಷ್ಟು ವದಂತಿಗಳಿಗೆ ಕಾರಣವಾಗಿದೆ.







