Mann Ki Baat: 2025ರ ಕೊನೆಯ ಸಂಚಿಕೆಯಲ್ಲಿ ಯುವಜನರ ಮೇಲೆ ಗಮನ ಕೇಂದ್ರೀಕರಿಸಿದ ಮೋದಿ; ವಾಯುಮಾಲಿನ್ಯದ ಮಾತೇ ಇಲ್ಲ!

ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ,ಡಿ.28: ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಭಾರತದ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಒತ್ತಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ 2025ನೇ ಸಾಲಿನ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ವಿದಾಯ ಹೇಳಿದರು.
129ನೇ ಸಂಚಿಕೆಯಲ್ಲಿ ಪ್ರಸಕ್ತ ವರ್ಷದ ಪ್ರಮುಖ ಬೆಳವಣಿಗೆಗಳನ್ನು ಪ್ರತಿಬಿಂಬಿಸಿದ ಅವರು ನವೀನತೆ, ಸಂಸ್ಕೃತಿ ಮತ್ತು ಸಾರ್ವಜನಿಕ ಆರೋಗ್ಯ ಇವು ಹೊಸವರ್ಷದಲ್ಲಿ ಗಮನ ಸೆಳೆಯುವ ಕ್ಷೇತ್ರಗಳಾಗಲಿವೆ ಎಂದರು. ತ್ವರಿತ ತಾಂತ್ರಿಕ ಬದಲಾವಣೆಯ ನಡುವೆ ಮಾನವೀಯ ವೌಲ್ಯಗಳನ್ನು ಕಳೆದುಕೊಳ್ಳುವುದರ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ, ‘ಇಂದಿನ ಜೀವನವು ತಂತ್ರಜ್ಞಾನ ಆಧಾರಿತವಾಗುತ್ತಿದೆ ಮತ್ತು ಶತಮಾನಗಳಲ್ಲಿ ಸಂಭವಿಸುತ್ತಿದ್ದ ಬದಲಾವಣೆಗಳು ಕೆಲವೇ ವರ್ಷಗಳಲ್ಲಿ ಸಂಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವೊಮ್ಮೆ, ರೋಬಾಟ್ ಗಳು ಮನುಷ್ಯರ ಸ್ಥಾನವನ್ನು ಆಕ್ರಮಿಸಲಿವೆಯೇ ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ’ ಎಂದರು.
ಸಾಂಸ್ಕೃತಿಕ ಬೇರುಗಳೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳುವುದು ಮಾನವ ಅಭಿವೃದ್ಧಿಗೆ ಅಗತ್ಯವಾಗಿದೆ ಎಂದು ಹೇಳಿದರು. ಭಾರತದ ಯುವ ಜನಸಂಖ್ಯೆ ದೇಶದ ಅತಿದೊಡ್ಡ ಭರವಸೆಯ ಮೂಲವಾಗಿದೆ ಎಂದು ಹೇಳಿದ ಅವರು,ರಾಷ್ಟ್ರೀಯ ಯುವದಿನ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಜ.12ರಂದು ವಿಕಸಿತ ಭಾರತ ಯುವ ನಾಯಕರ ಸಂವಾದದ ಎರಡನೇ ಆವೃತ್ತಿಯನ್ನು ನಡೆಸಲಾಗುವುದು ಎಂದು ಪ್ರಕಟಿಸಿದರು.
ಸಾರ್ವಜನಿಕ ಆರೋಗ್ಯಕುರಿತಂತೆ, ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳಂತಹ (ಯುಟಿಐ) ರೋಗಗಳ ವಿರುದ್ಧ ಆ್ಯಂಟಿಬಯಾಟಿಕ್ ಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿರುವ ಐಸಿಎಂಆರ್ ವರದಿಗಳನ್ನು ಬೆಟ್ಟು ಮಾಡಿದ ಮೋದಿ,ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯಾಟಿಕ್ ಗಳನ್ನು ಬಳಸದಂತೆ ಜನರನ್ನು ಆಗ್ರಹಿಸಿದರು. ಆ್ಯಂಟಿಬಯಾಟಿಕ್ ಗಳ ವಿವೇಚನಾರಹಿತ ಬಳಕೆಯು ಅವುಗಳ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಕಿವಿಮಾತನ್ನು ಹೇಳಿದರು. ಆದಾಗ್ಯೂ, ಅವರು ತನ್ನ 30 ನಿಮಿಷಗಳಿಗೂ ಹೆಚ್ಚು ಕಾಲದ ಭಾಷಣದಲ್ಲಿ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ತೀವ್ರ ವಾಯುಮಾಲಿನ್ಯವನ್ನು ಉಲ್ಲೇಖಿಸುವ ಗೋಜಿಗೆ ಹೋಗಲಿಲ್ಲ.
‘ಮನ್ ಕಿ ಬಾತ್’ ಪ್ರಸಾರ ಆರಂಭಗೊಳ್ಳುತ್ತಿದ್ದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇತ್ತೀಚಿನ ಭಾರತ ಭೇಟಿ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವಿನ ಚಿತ್ರಗಳು ಸೇರಿದಂತೆ 2025ರ ಪ್ರಮುಖ ದೃಶ್ಯಾವಳಿಗಳು ಪರದೆಯ ಮೇಲೆ ಕಾಣಿಸಿಕೊಳ್ಳತೊಡಗಿದ್ದವು. ಮೋದಿ 2025ನ್ನು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ವಿಶ್ವಾಸವನ್ನು ಬಲಗೊಳಿಸಿದ ವರ್ಷ ಎಂದು ಬಣ್ಣಿಸಿದರು.
ರಾಷ್ಟ್ರೀಯ ಭದ್ರತೆ ಕುರಿತಂತೆ ಮೋದಿ, ಈ ವರ್ಷ ‘ಆಪರೇಷನ್ ಸಿಂಧೂರ ’ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಯಿತು. ಇಂದಿನ ಭಾರತವು ತನ್ನ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ಜಗತ್ತು ಸ್ಪಷ್ಟವಾಗಿ ನೋಡಿದೆ ಎಂದು ಹೇಳಿದರು.
ಇತ್ತೀಚಿನ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಸ್ತೃತ ಚರ್ಚೆಗಳಿಗೆ ನಾಂದಿ ಹಾಡಿದ್ದ ‘ವಂದೇ ಮಾತರಂ’ ಗೀತೆ 150 ವರ್ಷಗಳನ್ನು ಪೂರೈಸಿದ್ದನ್ನೂ ಅವರು ಉಲ್ಲೇಖಿಸಿದರು. ಈ ವರ್ಷವು ಮಹಾಕುಂಭದೊಂದಿಗೆ ಆರಂಭಗೊಂಡು ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣದೊಂದಿಗೆ ಸಂಪನ್ನಗೊಂಡಿದ್ದನ್ನು ಮೆಲುಕು ಹಾಕಿದ ಪ್ರಧಾನಿ, ಇವೆರಡೂ ನಂಬಿಕೆ, ಸಂಸ್ಕೃತಿ ಮತ್ತು ರಾಷ್ಟ್ರೀಯ ಅನನ್ಯತೆಯನ್ನು ಒಟ್ಟುಗೂಡಿಸಿದ ಕ್ಷಣಗಳಾಗಿದ್ದವು ಎಂದು ಬಣ್ಣಿಸಿದರು. ‘ಇದು 2025ರಲ್ಲಿ ಮನ್ ಕಿ ಬಾತ್ ನ ಕೊನೆಯ ಸಂಚಿಕೆ. 2026ರಲ್ಲಿ ನಾವು ಮತ್ತೆ ಭೇಟಿಯಾಗುತ್ತೇವೆ. ಹೊಸ ಸಂಚಿಕೆಗಳು,ಹೊಸ ವಿಷಯಗಳೊಂದಿಗೆ ನಾವು ಇದೇ ಉತ್ಸಾಹ,ಶಕ್ತಿ ಮತ್ತು ಒಗ್ಗಟ್ಟಿನ ಭಾವನೆಯೊಂದಿಗೆ ಮರಳುತ್ತೇವೆ’ ಎಂದು ಪ್ರಸಾರದ ಅಂತ್ಯದಲ್ಲಿ ಹೇಳಿದ ಮೋದಿ, ಚಳಿಗಾಲದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳುವಂತೆ ಜನರನ್ನು ಆಗ್ರಹಿಸಿದರು.







