ಮನ್ ಕಿ ಬಾತ್ನಲ್ಲಿ ಆರೆಸ್ಸೆಸ್ನ್ನು ಹೊಗಳಿದ ಪ್ರಧಾನಿ ಮೋದಿ : ಗಾಂಧಿ ಜಯಂತಿಗೆ ಖಾದಿ ಖರೀದಿಗೆ ಆಗ್ರಹ

ನರೇಂದ್ರ ಮೋದಿ | PTI
ಹೊಸದಿಲ್ಲಿ,ಸೆ.28: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ನ್ನು ಆರೆಸ್ಸೆಸ್ ತನ್ನ ನೂರು ವರ್ಷಗಳನ್ನು ಪೂರೈಸಲಿರುವ ಬಗ್ಗೆ ಮಾತನಾಡಲು, ಗಾಂಧಿ ಜಯಂತಿಯಂದು ಖಾದಿ ಖರೀದಿಯನ್ನು ಉತ್ತೇಜಿಸಲು ಮತ್ತು ಛತ್ ಪೂಜೆಗೆ ಯುನೆಸ್ಕೋ ಮಾನ್ಯತೆ ಪಡೆಯಲು ಸರಕಾರವು ಶ್ರಮಿಸುತ್ತಿರುವುದನ್ನು ಹಂಚಿಕೊಳ್ಳಲು ಬಳಸಿಕೊಂಡರು.
ತನ್ನ 125ನೇ ಬಾನುಲಿ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಪ್ರಶಂಸಿಸಿದ ಮೋದಿ, ನಿಸ್ವಾರ್ಥ ಸೇವೆಯ ಮನೋಭಾವ ಮತ್ತು ಶಿಸ್ತಿನ ಪಾಠ ಇವು ಸಂಘದ ನಿಜವಾದ ಶಕ್ತಿಗಳಾಗಿವೆ ಎಂದರು. ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಮತ್ತು ಗುರು ಗೋಲ್ವಾಲ್ಕರ್ ಅವರನ್ನು ಸ್ಮರಿಸಿದ ಮೋದಿ, ಅವರು ರಾಷ್ಟ್ರ ಸೇವೆಯ ಮನೋಭಾವವನ್ನು ಬೆಳೆಸಲು ಶ್ರಮಿಸಿದ್ದರು ಎಂದರು. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ನೆರವಿಗೆ ಧಾವಿಸುವವರಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಯಾವಾಗಲೂ ಮೊದಲಿಗರಾಗಿದ್ದಾರೆ ಎಂದೂ ಹೇಳಿದರು.
ಹಬ್ಬಗಳ ಕುರಿತು ಮಾತನಾಡಿದ ಪ್ರಧಾನಿ, ಛತ್ ಪೂಜೆ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಸರಕಾರವು ಈ ಹಬ್ಬವನ್ನು ಯನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ. ಇದು ಸಂಭವಿಸಿದಾಗ ಪ್ರಪಂಚದ ವಿವಿಧ ಮೂಲೆಗಳಲ್ಲಿರುವ ಜನರು ಹಬ್ಬದ ಭವ್ಯ ದೈವತ್ವವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಕೋಲ್ಕತಾದ ದುರ್ಗಾ ಪೂಜೆಯು ಈಗಾಗಲೇ ಯುನೆಸ್ಕೋ ಪಟ್ಟಿಗೆ ಸೇರಿದೆ ಎಂದು ಹೇಳಿದರು.
ಅ.2ರಂದು ಖಾದಿ ವಸ್ತುಗಳನ್ನು ಖರೀದಿಸುವ ಮೂಲಕ ಸ್ವದೇಶಿ ಅಭಿಯಾನವನ್ನು ಬೆಂಬಲಿಸುವಂತೆ ಜನರನ್ನು ಆಗ್ರಹಿಸಿದ ಪ್ರಧಾನಿ, ‘ಇದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳಿ’ ಎಂದರು. ಕಳೆದ 11 ವರ್ಷಗಳಲ್ಲಿ ಖಾದಿ ಮಾರಾಟವು ಬಲವಾಗಿ ಬೆಳೆದಿದೆ ಎಂದು ತಿಳಿಸಿದರು.
ನಾವಿಕ ಸಾಗರ ಪರಿಕ್ರಮದಲ್ಲಿ ಭಾಗಿಯಾಗಿದ್ದ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳಾದ ಲೆ.ಕ.ದಿಲ್ನಾ ಮತ್ತು ಲೆ.ಕ.ರೂಪಾ ಅವರೊಂದಿಗೂ ಮೋದಿ ಮಾತನಾಡಿದರು. ಭಗತ ಸಿಂಗ್ ಮತ್ತು ಗಾಯಕಿ ಲತಾ ಮಂಗೇಶ್ಕರ್ ಜನ್ಮದಿನದಂದು ಅವರಿಗೆ ಗೌರವಗಳನ್ನು ಸಲ್ಲಿಸಿದ ಪ್ರಧಾನಿ, ಅವರು ಇಂದಿಗೂ ಭಾರತೀಯರಿಗೆ ಸ್ಫೂರ್ತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು.







