ಅಮೆರಿಕದಿಂದ ಗಡಿಪಾರಾದ ಭಾರತೀಯರು ‘ಅಪರಾಧಿಗಳು’: ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್

ಮನೋಹರ್ ಲಾಲ್ ಖಟ್ಟರ್ | PTI
ಚಂಡಿಗಢ: ಅಮೆರಿಕದಿಂದ ಗಡಿಪಾರು ಮಾಡಲಾದ ಅಕ್ರಮ ಭಾರತೀಯ ವಲಸಿಗರನ್ನು ‘‘ಅಪರಾಧಿಗಳು’’ ಎಂದು ಕೇಂದ್ರ ಸಚಿವ ಹಾಗೂ ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗುರುವಾರ ಹೇಳಿದ್ದಾರೆ.
ಗಡಿಪಾರು ಮಾಡಲಾದ ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕ ಅಮಾನವೀಯವಾಗಿ ನಡೆಸಿಕೊಂಡ ಬಗೆಗಿನ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಅಕ್ರಮ ಭಾರತೀಯ ವಲಸಿಗರ ಬಗ್ಗೆ ಯಾವುದೇ ಅನುಕಂಪ ತೋರಿಸುವ ಅಗತ್ಯ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.
‘‘ಒಂದು ದೇಶಕ್ಕೆ ಅಕ್ರಮವಾಗಿ ಪ್ರವೇಶಿಸುವವರು ಅಪರಾಧಿಗಳು. ಅವರ ಬಗ್ಗೆ ಯಾವುದೇ ಅನುಕಂಪ ತೋರಿಸಬಾರದು. ಸಲಹೆ ನೀಡಿರುವ ಹೊರತಾಗಿಯೂ ನಮ್ಮ ಜನರು ಈ ಪ್ರಯಾಣ ಮಾಡುತ್ತಿದ್ದಾರೆ. ಅವರು ಈ ದಾರಿಯನ್ನು ಆಯ್ದುಕೊಳ್ಳಬಾರದು. ಇದು ಮಾದಕ ದ್ರವ್ಯದ ಚಟದಂತೆ ಕೆಟ್ಟದ್ದು. ನಾವು ಅವರ ಬಗ್ಗೆ ಯಾಕೆ ಅನುಕಂಪ ತೋರಿಸಬೇಕು? ಎಂದು ಖಟ್ಟರ್ ಪ್ರಶ್ನಿಸಿದ್ದಾರೆ.
ಭಾರತಕ್ಕೆ ಹಿಂದಿರುಗಿದ ಅಕ್ರಮ ಭಾರತೀಯ ವಲಸಿಗರಿಗೆ ಪುನರ್ವಸತಿ ಕಲ್ಪಿಸುವುದು ಹೇಗೆ ಎಂಬ ಬಗ್ಗೆ ಕೂಡ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘‘ಅವರನ್ನು ಯಾವುದೇ ರೀತಿಯಲ್ಲಿ ಹಿಂದೆ ಕಳುಹಿಸಿದ್ದರೂ ಅವರಿಗೆ ಹೇಗೆ ಪುನರ್ವಸತಿ ಕಲ್ಪಿಸುವುದು ಎಂಬುದು ಈಗ ನಮ್ಮ ಚಿಂತೆ’’ ಎಂದು ಖಟ್ಟರ್ ಹೇಳಿದ್ದಾರೆ.
ಅಮೆರಿಕದಿಂದ ಗಡಿಪಾರು ಮಾಡಲಾದ ಅಕ್ರಮ ಭಾರತೀಯ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಂಡ ವಿಷಯದ ಕುರಿತು ಮಧ್ಯಪ್ರವೇಶಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿರಾಕರಿಸಿದ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ನಡುವೆ ಖಟ್ಟರ್ ಅವರು ಈ ಹೇಳಿಕೆ ನೀಡಿದ್ದಾರೆ.







