ಮರಾಠ ಮೀಸಲಾತಿ ಹೋರಾಟ |ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗಿರುವ ಹಾನಿಯನ್ನು ಯಾರು ಭರಿಸುತ್ತಾರೆ?: ಮನೋಜ್ ಜರಾಂಗೆಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

PC : PTI
ಮುಂಬೈ: ಮನೋಜ್ ಜರಾಂಗೆ ನೇತೃತ್ವದಲ್ಲಿ ನಡೆದ ಮರಾಠ ಮೀಸಲಾತಿ ಹೋರಾಟದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗಿರುವ ಹಾನಿಯ ಕುರಿತು ತನ್ನ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿರುವ ಬಾಂಬೆ ಹೈಕೋರ್ಟ್, “ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ಹಾನಿಯನ್ನು ಯಾರು ಭರಿಸುತ್ತಾರೆ?” ಎಂದು ಬುಧವಾರ ಮನೋಜ್ ಜರಾಂಗೆಯನ್ನು ಖಾರವಾಗಿ ಪ್ರಶ್ನಿಸಿದೆ.
ಆಝಾದ್ ಮೈದಾನವನ್ನು ತೆರವುಗೊಳಿಸಬೇಕು ಎಂದು ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಹಾಗೂ ನ್ಯಾ. ಆರ್ತಿ ಸಾಠೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠದೆದುರು ಈ ಅರ್ಜಿ ವಿಚಾರಣೆಗೆ ಬಂದಿತು.
ಮಹಾರಾಷ್ಟ್ರ ಸರಕಾರದೊಂದಿಗೆ ಮರಾಠ ಮೀಸಲಾತಿ ಹೋರಾಟದ ಕುರಿತು ಮಾತುಕತೆ ನಡೆಸಿದ ನಂತರ, ಹೋರಾಟವನ್ನು ಹಿಂಪಡೆಯಲಾಗಿದೆ ಎಂದು ಮನೋಜ್ ಜರಾಂಗೆ ಅವರ ಕಾನೂನು ತಂಡವು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ, ನ್ಯಾಯಾಲಯ ಮೇಲಿನಂತೆ ಪ್ರಶ್ನಿದಸಿದೆ.
ಐದು ದಿನಗಳ ಕಾಲ ನಡೆದ ಮರಾಠ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಮನೋಜ್ ಜರಾಂಗೆ ಪಾಟೀಲ್ ಹಾಗೂ ಮರಾಠ ಮೀಸಲಾತಿ ಹೋರಾಟ ಸಂಘಟನೆಗಳ ಪರವಾಗಿ ಹಿರಿಯ ವಕೀಲ ಸತೀಶ್ ಮಾನೆಶಿಂದೆ ಹಾಗೂ ವಕೀಲ ವಿ.ಎಂ.ಥೋರಟ್ ನ್ಯಾಯಾಲಯದೆದುರು ಹಾಜರಾದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “ಇಲ್ಲಿ ಕೆಲವು ಸಮಸ್ಯೆಗಳಿವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಅದನ್ನು ಯಾರು ಭರಿಸುತ್ತಾರೆ?” ಎಂದು ಪ್ರತಿಭಟನಾಕಾರರ ಪರ ವಕೀಲರನ್ನು ಪ್ರಶ್ನಿಸಿತು.
ಅದಕ್ಕೆ ಪ್ರತಿಯಾಗಿ, ಸಾಮಾನ್ಯ ಜನರಿಗೆ ಅನನುಕೂಲವಾಗಿರುವುದನ್ನು ಹೊರತುಪಡಿಸಿ, ಯಾವುದೇ ದೊಡ್ಡ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿಲ್ಲ ಎಂದು ಪ್ರತಿಭಟನಾಕಾರರ ಪರ ವಕೀಲರು ವಾದಿಸಿದರು.
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ, ಮನೋಜ್ ಜರಾಂಗೆ ಪಾಟೀಲ್ ಹಾಗೂ ಮರಾಠ ಮೀಸಲಾತಿ ಹೋರಾಟ ಸಂಘಟನೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿತು. ಈ ಪ್ರಮಾಣ ಪತ್ರಗಳನ್ನು ಇನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದೂ ಮನೋಜ್ ಜರಾಂಗೆ ಪಾಟೀಲ್ ಹಾಗೂ ಅವರ ತಂಡಕ್ಕೆ ನ್ಯಾಯಪೀಠ ನಿರ್ದೇಶನ ನೀಡಿತು.







