ತ್ರಿಭಾಷಾ ಸೂತ್ರದ ಬಗ್ಗೆ ಮಹಾರಾಷ್ಟ್ರ ಸರಕಾರದ ಸಭೆ; ಮರಾಠಿ ಭಾಷೆಗೆ ಅವಮಾನ: ಸಂಜಯ್ ರಾವತ್

Photo Credit: ANI
ಮುಂಬೈ: ತ್ರಿಭಾಷಾ ಸೂತ್ರದ ವಿವಾದದ ನಡುವೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್, ಈ ವಿಷಯದ ಕುರಿತು ಸರಣಿ ಸಭೆಗಳನ್ನು ನಡೆಸಲು ಮಹಾರಾಷ್ಟ್ರ ಸರಕಾರ ಕೈಗೊಂಡ ಕ್ರಮ ಮರಾಠಿ ಭಾಷೆಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಮರಾಠಿಯ ಪ್ರಮುಖ ಸಾಹಿತಿಗಳು ಹಾಗೂ ಗಣ್ಯರ ಮೌನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸರಕಾರದೊಂದಿಗಿನ ತಮ್ಮ ನಂಟಿನ ಕಾರಣಕ್ಕೆ ಹೆಚ್ಚಿನವರು ಈ ವಿಷಯದ ಕುರಿತು ಧ್ವನಿ ಎತ್ತಲಿಲ್ಲ ಎಂದು ಅವರು ಹೇಳಿದ್ದಾರೆ.
ಹಲವು ಸಂಪುಟ ಸಚಿವರು ಹಾಗೂ ಸಾಹಿತಿಗಳ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದಾರೆ. ಆದುದರಿಂದ ಮರಾಠಿ ಭಾಷೆಯನ್ನು ಸಂರಕ್ಷಿಸುವ ಕುರಿತು ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರ ಕಳೆದ ವಾರ ತಿದ್ದುಪಡಿ ಮಾಡಿದ ಆದೇಶವೊಂದನ್ನು ಹೊರಡಿಸಿದ್ದು, 1ರಿಂದ 5ನೇ ತರಗತಿ ವರಗೆ ಮರಾಠಿ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲಾಗುವುದು ಎಂದು ಹೇಳಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.
ಅನಂತರ ಸರಕಾರ ಹಿಂದಿ ಕಲಿಕೆ ಕಡ್ಡಾಯವಲ್ಲ. ಆದರೆ, ಹಿಂದಿ ಹೊರತುಪಡಿಸಿ ಇತರ ಭಾಷೆ ಕಲಿಯಲು ಬಯಸಿದರೆ, ಶಾಲೆಯ ಪ್ರತಿ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳ ಒಪ್ಪಿಗೆ ಕಡ್ಡಾಯ ಎಂದು ಹೇಳಿತ್ತು.
ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಸೋಮವಾರ ರಾತ್ರಿ ಸಭೆ ನಡೆಸಿದ್ದಾರೆ ಹಾಗೂ ಬರಹಗಾರರು, ಭಾಷಾ ತಜ್ಞರು ಹಾಗೂ ರಾಜಕೀಯ ನಾಯಕರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತ್ರಿಭಾಷೆಗಳ ಸೂತ್ರದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.