ಮಾರ್ಕ್ ಝುಕರ್ ಬರ್ಗ್ ವಿರುದ್ಧವೇ ಮೊಕದ್ದಮೆ ದಾಖಲಿಸಿದ ಮಾರ್ಕ್ ಝುಕರ್ ಬರ್ಗ್!

ಮಾರ್ಕ್ ಝುಕರ್ ಬರ್ಗ್ | PC : PTI
ನ್ಯೂಯಾರ್ಕ್: ತಾನು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಸೋಗು ಹಾಕುತ್ತಿದ್ದೇನೆಂದು ತಪ್ಪಾಗಿ ತನ್ನನ್ನು ಫೇಸ್ ಬುಕ್ ನಿಂದ ಬ್ಲಾಕ್ ಮಾಡಲಾಗಿದೆ ಎಂದು ಆರೋಪಿಸಿ, ಮಾರ್ಕ್ ಝುಕರ್ ಬರ್ಗ್ ಹೆಸರನ್ನೇ ಹೊಂದಿರುವ ವಕೀಲರೊಬ್ಬರು ಮೆಟಾ ಸಂಸ್ಥೆಯ ವಿರುದ್ಧ ಮೊಕದ್ದಮೆ ದಾಖಲಿಸಿರುವ ಘಟನೆ ವರದಿಯಾಗಿದೆ.
ಅಟಾರ್ನಿ ಮಾರ್ಕ್ ಎಸ್. ಝುಕರ್ ಬರ್ಗ್ ಎಂಬವರು ಇಂಡಿಯಾನ ಮೂಲದವರಾಗಿದ್ದು, ಕಳೆದ 38 ವರ್ಷಗಳಿಂದ ವಕೀಲಿಕೆಯನ್ನು ನಡೆಸುತ್ತಿದ್ದಾರೆ. ಬೇರೊಬ್ಬರಂತೆ ಸೋಗು ಹಾಕುತ್ತಿದ್ದೇನೆಂದು ಕಳೆದ ಎಂಟು ವರ್ಷಗಳಲ್ಲಿ ಐದು ಬಾರಿ ಫೇಸ್ ಬುಕ್ ತನ್ನ ಖಾತೆಯನ್ನು ಅಮಾನತುಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ. ಹೀಗೆ ಪದೇ ಪದೇ ನಿಷೇಧ ಹೇರಿದ್ದರಿಂದ ನನ್ನ ವಕೀಲಿಕೆ ವೃತ್ತಿಗೆ ಮಾತ್ರ ಹಾನಿಯಾಗಿಲ್ಲ; ಬದಲಿಗೆ, ನನ್ನ ವ್ಯವಹಾರದಲ್ಲಿ ಸಾವಿರಾರು ಡಾಲರ್ ನಷ್ಟವನ್ನುಂಟು ಮಾಡಿದೆ ಎಂದು ಅವರು ದೂರಿದ್ದಾರೆ.
ಮೇರಿಯಾನ್ ಸುಪೀರಿಯರ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಮಾರ್ಕ್ ಎಸ್. ಝುಕರ್ ಬರ್ಗ್, ಪಾವತಿ ಮಾಡಿದ 11,000 ಡಾಲರ್ ಮೌಲ್ಯದ ಜಾಹೀರಾತನ್ನು ಕಿತ್ತೊಗೆಯುವ ಮೂಲಕ, ಮೆಟಾ ಕರಾರನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು WTHR-TVಗೆ ಪ್ರತಿಕ್ರಿಯಿಸಿರುವ ಮಾರ್ಕ್ ಎಸ್. ಝುಕರ್ ಬರ್ಗ್, “ಇದೊಂದು ರೀತಿ ಹೆದ್ದಾರಿಯಲ್ಲಿ ಬಿಲ್ ಬೋರ್ಡ್ ಅನ್ನು ಖರೀದಿಸಿದಂತೆ. ನೀವು ಯಾವುದಕ್ಕಾಗಿ ಪಾವತಿಸಿರುತ್ತೀರೊ, ಅದರ ಪ್ರಯೋಜನ ನಿಮಗೆ ದೊರೆಯುವುದೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ನಿಷೇಧದಿಂದ ನನ್ನ ವ್ಯವಹಾರಕ್ಕೆ ನಿಜಕ್ಕೂ ಹಾನಿಯಾಗಿದೆ. ಇದು ತಮಾಷೆಯಲ್ಲ. ಅದರಲ್ಲೂ, ನೀವು ನನ್ನಿಂದ ದುಡ್ಡು ಪಡೆದೂ” ಎಂದು ಅವರು ಅತೃಪ್ತಿ ತೋಡಿಕೊಂಡಿದ್ದಾರೆ.







