ಮಧ್ಯಪ್ರದೇಶದಲ್ಲಿ 15 ವರ್ಷದ ಬಾಲಕಿಗೆ ವಿವಾಹ : 7 ಮಂದಿಯ ವಿರುದ್ಧ ಪ್ರಕರಣ
ಸಾಂದರ್ಭಿಕ ಚಿತ್ರ
ಭೋಪಾಲ್ : ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ 15 ವರ್ಷ ವಯಸ್ಸಿನ ಬಾಲಕಿಯೊಬ್ಬಳಿಗೆ ವಿವಾಹ ಮಾಡಿದ ಆರೋಪದಲ್ಲಿ ಏಳು ಮಂದಿಯ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೋವ್ ಜಿಲ್ಲೆಯ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಧಾರ್ ಜಿಲ್ಲೆಯಿಂದ 24 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆಯೆಂದು ಮಣಿಪುರ ಪೊಲೀಸ್ ಠಾಣಾ ಉಸ್ತುವಾರಿ ಅರುಣ್ ಸೋಲಂಕಿ ತಿಳಿಸಿದ್ದಾರೆ.
2023ರ ನವೆಂಬರ್ 29ರಂದು ಮನ್ಪುರ ಪಟ್ಟಣದ ದೇವಾಲಯವೊಂದರಲ್ಲಿ ವಿವಾಹ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಹೆತ್ತವರು, ವರ ಹಾಗೂ ಆತನ ತಂದೆ, ವಿವಾಹ ವಿಧಿಗಳನ್ನು ನೆರವೇರಿಸಿದ ಆರ್ಚಕ ಮತ್ತಿಬ್ಬರನ್ನು ಆರೋಪಿಗಳೆಂದು ಹೆಸರಿಸಲಾಗಿದೆಯೆಂದು ಅವರು ಹೇಳಿದ್ದಾರೆ.