ಕುಡಿತದ ದಾಸ ಗಂಡಂದಿರ ಹಿಂಸೆಗೆ ಬೇಸತ್ತು ಮದುವೆಯಾದ ಮಹಿಳೆಯರು

ಸಾಂದರ್ಭಿಕ ಚಿತ್ರ | PC : freepik.com
ಲಕ್ನೋ : ಕುಡಿತದ ದಾಸರಾಗಿ ತಮಗೆ ಹಿಂಸೆ ನೀಡುತ್ತಿದ್ದ ಗಂಡಂದಿರ ವರ್ತನೆಯಿಂದ ಬೇಸತ್ತ ಇಬ್ಬರು ಮಹಿಳೆಯರು, ತಮ್ಮ ಮನೆಗಳನ್ನು ತೊರೆದು ಪರಸ್ಪರರನ್ನು ಮದುವೆಯಾದ ಘಟನೆ ಉತ್ತರಪ್ರದೇಶದ ಗೋರಖ್ಪುರದಿಂದ ವರದಿಯಾಗಿದೆ.
ಕವಿತಾ ಮತ್ತು ಗುಂಜಾ ಯಾನೆ ಬಬ್ಲು ಗುರುವಾರ ಸಂಜೆ ಗೋರಖ್ಪುರದ ದೇವರಿಯದಲ್ಲಿರುವ ಶಿವ ದೇವಾಲಯದಲ್ಲಿ ಮದುವೆಯಾದರು.
ಅವರು ಇನ್ಸ್ಟಾಗ್ರಾಮ್ನಲ್ಲಿ ಪರಿಚಿತರಾದರು. ಬಳಿಕ ಶೀಘ್ರವೇ ಗೆಳತಿಯರಾದರು. ಆರು ವರ್ಷಗಳ ಕಾಲ ಸ್ನೇಹದ ಬಳಿಕ, ಅವರು ಮದುವೆಯಾಗಲು ನಿರ್ಧರಿಸಿದರು. ತಾವು ಗಂಡಂದಿರಿಂದ ಹಿಂಸೆಗೆ ಒಳಗಾಗಿದ್ದೇವೆ ಎಂಬುದಾಗಿ ಇಬ್ಬರೂ ಮಹಿಳೆಯರು ಹೇಳಿದ್ದಾರೆ.
ದೇವಸ್ಥಾನದಲ್ಲಿ, ಗುಂಜಾ ಮದುಮಗನ ಪಾತ್ರವನ್ನು ನಿಭಾಯಿಸಿ ಕವಿತಾರ ಹಣೆಯ ಮೇಲೆ ಸಿಂಧೂರ ಇಟ್ಟರು. ಅವರು ಹಾರ ವಿನಿಮಯ ಮಾಡಿಕೊಂಡು ಸಪ್ತಪದಿಯನ್ನೂ ತುಳಿದರು.
ಕುಡಿತದ ದಾಸನಾಗಿರುವ ತನ್ನ ಗಂಡ ಪ್ರತಿದಿನ ಹೊಡೆಯುತ್ತಿದ್ದನು ಎಂದು ಓರ್ವ ಮಹಿಳೆ ಹೇಳಿದ್ದಾರೆ. ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಹಿಂಸೆಯಿಂದ ಬೇಸತ್ತ ಬಳಿಕ ಅವರು ತನ್ನ ತವರು ಮನೆಗೆ ವಾಪಸಾಗಿದ್ದಾರೆ.
ತನ್ನ ಗಂಡನೂ ಕುಡಿತದ ದಾಸನಾಗಿದ್ದು, ತನ್ನ ಶೀಲವನ್ನು ಶಂಕಿಸುತ್ತಿದ್ದನು ಎಂದು ಇನ್ನೋರ್ವ ಮಹಿಳೆ ಹೇಳಿದ್ದಾರೆ. ಅವರೂ ಬಳಿಕ ತನ್ನ ಗಂಡನನ್ನು ತೊರೆದಿದ್ದಾರೆ.
‘‘ನಾವು ಗಂಡಂದಿರ ಕುಡಿತ ಮತ್ತು ಹೊಡೆತದಿಂದ ಹಿಂಸೆ ಅನುಭವಿಸಿದ್ದೇವೆ. ಇದು ಶಾಂತಿ ಮತ್ತು ಪ್ರೀತಿಯ ಜೀವನವೊಂದನ್ನು ಆರಿಸಲು ನಮ್ಮನ್ನು ಪ್ರೇರೇಪಿಸಿತು. ನಾವು ದಂಪತಿಯಾಗಿ ಗೋರಖ್ಪುರದಲ್ಲಿ ವಾಸಿಸಲು ಮತ್ತು ಜೀವನೋಪಾಯಕ್ಕಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ’’ ಎಂದು ಗುಂಜಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.







