ದಲಿತ ಯುವಕನನ್ನು ವಿವಾಹವಾಗಿದ್ದಕ್ಕಾಗಿ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ ಯತ್ನ: ಇಬ್ಬರು ಸಾವು

ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ತಮ್ಮ ಪುತ್ರಿ ದಲಿತ ಯುವಕನನ್ನು ಪ್ರೇಮ ವಿವಾಹವಾಗಿದ್ದಕ್ಕಾಗಿ ಅಸಮಾಧಾನಗೊಂಡ ದಂಪತಿ ಹಾಗೂ ಅವರ ಇಬ್ಬರು ಪುತ್ರರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ ಪತಿ ಹಾಗೂ ಓರ್ವ ಪುತ್ರ ಸಾವನ್ನಪ್ಪಿದ ದಾರುಣ ಘಟನೆ ಗುಜರಾತ್ನ ಅಹ್ಮದಾಬಾದ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಒಂದು ವರ್ಷ ಹಿಂದೆ ದಲಿತ ಸಮುದಾಯದ ಯುವಕನನ್ನು ಪುತ್ರಿಯು ಪ್ರೇಮವಿವಾಹವಾದ್ದರಿಂದ ಅಸಂತುಷ್ಟಗೊಂಡ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದರೆಂದು ಧೋಲ್ಕಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಕಿರಣ್ ರಾಥೋಡ್ (52), ಅವರ ಪತ್ನಿ ನೀತಾ ಬೆನ್ (50) ಹಾಗೂ ಅವರ ಇಬ್ಬರು ಪುತ್ರರಾದ ಹರ್ಷ (24) ಹಾಗೂ ಹರ್ಷಿಲ್ (19) ಮಂಗಳವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ನೆರೆಹೊರೆಯವರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಅವರು ಆ್ಯಂಬುಲೆನ್ಸ್ ಕರೆಯಿಸಿ ನಾಲ್ವರನ್ನೂ ಆಸ್ಪತ್ರೆಗೆ ದಾಖಲಿಸಿದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು.
ಘಟನೆಯಲ್ಲಿ ಕಿರಣ್ ರಾಥೋಡ್ ಹಾಗೂ ಆತನ ಹಿರಿಯ ಪುತ್ರ ಹರ್ಷ ಸಾವನ್ನಪ್ಪಿದ್ದಾರೆ. ಕಿರಣ್ ರಾಥೋಡ್ನ ಪತ್ನಿ ಹಾಗೂ ಕಿರಿಯ ಪುತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರಾಥೋಡ್ನ ಪುತ್ರಿಯ ಗಂಡನ ಮನೆಯವರು ಸೇರಿದಂತೆ 18 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.







