ಉತ್ತರ ಪ್ರದೇಶದಲ್ಲಿ ಭಾರೀ ಬೆಂಕಿ ಅವಘಡ; 200 ಮನೆಗಳು ಬೆಂಕಿಗಾಹುತಿ

Photo credit: PTI
ಬದೌನ್ (ಉತ್ತರ ಪ್ರದೇಶ): ಸಿಡಿಲು ಬಡಿದು ಟ್ರಾನ್ಸ್ಫಾರ್ಮರ್ ಒಂದು ಸ್ಫೋಟಗೊಂಡಿದ್ದರಿಂದ ಸಂಭವಿಸಿದ ಭಾರಿ ಬೆಂಕಿ ಅನಾಹುತದಲ್ಲಿ 200 ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಬದೌನ್ ಜಿಲ್ಲೆಯ ತಪ್ಪ ಜಮಾಯಿ ಗ್ರಾಮದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಹಲವಾರು ಜಾನುವಾರುಗಳು ಮೃತಪಟ್ಟಿದ್ದು, ಬೆಂಕಿಯ ಕೆನ್ನಾಲಿಗೆಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. "ಗಾಯಗೊಂಡಿದ್ದ ವ್ಯಕ್ತಿಯನ್ನು ಉಜ್ಜನಿಯ ಸಾಮುದಾಯಿಕ ಅರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
"ಮನೆಗಳಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸುವ ಹೊತ್ತಿಗಾಗಲೇ ಗ್ರಾಮದ ಸುಮಾರು 200 ಮನೆಗಳು ಸುಟ್ಟು ಭಸ್ಮವಾಗಿದ್ದವು" ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವಿನಾಶ್ ಕುಮಾರ್, "ಬುಧವಾರ ರಾತ್ರಿ ಸಿಡಿಲು ಹೊಡೆದಿದ್ದರಿಂದ ಟ್ರಾನ್ಸ್ ಫಾರ್ಮರ್ ಒಂದು ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಈ ಘಟನೆಯಲ್ಲಿ ಯಾರೂ ಮೃತಪಟ್ಟಿಲ್ಲವಾದರೂ, ಒಬ್ಬರಿಗೆ ಸುಟ್ಟ ಗಾಯಗಳಾಗಿವೆ" ಎಂದು ತಿಳಿಸಿದ್ದಾರೆ.
"ಈ ಬೆಂಕಿ ಅನಾಹುತದಲ್ಲಿ ಹಲವಾರು ಜಾನುವಾರುಗಳು ಮೃತಪಟ್ಟಿವೆ ಎಂಬ ವರದಿಗಳಿವೆ. ನಾವು ಈ ನಷ್ಟದ ಮೌಲ್ಯಮಾಪನ ನಡೆಸಲಿದ್ದು, ಸಂತ್ರಸ್ತ ಜನರಿಗೆ ಪರಿಹಾರ ಒದಗಿಸಲಿದ್ದೇವೆ. ಈ ಘಟನೆಯಲ್ಲಿ ಮನೆಗಳ ಹಾನಿಗೀಡಾಗಿರುವ ಸಂತ್ರಸ್ತರಿಗೂ ನೆರವು ಒದಗಿಸಲಾಗುವುದು" ಎಂದೂ ಅವರು ಹೇಳಿದ್ದಾರೆ.







