ಸೇನಾಧಿಕಾರಿಗಳಿಗಿರುವ ಹೆರಿಗೆ, ಶಿಶುಪಾಲನಾ ರಜೆ ಮಹಿಳಾ ಯೋಧರಿಗೂ ವಿಸ್ತರಣೆ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಮಹಿಳಾ ಸೇನಾಧಿಕಾರಿಗಳಿಗಿರುವ ಹೆರಿಗೆ, ಶಿಶುಪಾಲನೆ ಹಾಗೂ ಶಿಶು ದತ್ತು ಸ್ವೀಕಾರಕ್ಕಾಗಿನ ರಜೆಗಳನ್ನು ನೀಡಲು ಇರುವ ನಿಯಮಗಳನ್ನು ಭೂಸೇನೆ, ನೌಕಾಪಡೆ ಹಾಗೂ ವಾಯುಸೇನೆಯ ಮಹಿಳಾ ಯೋಧರಿಗೂ ಸರಿಸಮಾನವಾಗಿ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಅನುಮೋದನೆ ನೀಡಿದ್ದಾರೆ.
‘‘ ಸೇನೆಯಲ್ಲಿರುವ ಎಲ್ಲಾ ಮಹಿಳೆಯರಿಗೆ ಅವರು ಅಧಿಕಾರಿ ಅಥವಾ ಇನ್ಯಾವುದೇ ಶ್ರೇಣಿಗೆ ಸೇರಿದವರಾಗಿದ್ದರೂ, ಅವರೆಲ್ಲರಿಗೂ ಸರಿಸಮಾನವಾಗಿ ಈ ರಜಾನಿಯಮಗಳು ಅನ್ವಯವಾಗಲಿದೆ” ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಈ ರಜೆ ಸೌಲಭ್ಯಗಳ ವಿಸ್ತರಣಾ ಕ್ರಮವು, ಸೇನೆಯಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಯನ್ನು ಸುಧಾರಣೆಗೊಳಿಸಲಿದೆ. ತಮ್ಮ ವೃತ್ತಿ ಹಾಗೂ ಕೌಟುಂಬಿಕ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ಅವರಿಗೆ ನೆರವಾಗಲಿದೆ ಎಂದು ರಕ್ಷಣಾ ಸಚಿವರ ಕಚೇರಿಯು ‘x’ನಲ್ಲಿ ಪೋಸ್ಟ್ ಮಾಡಿದೆ.
ಪ್ರಸಕ್ತ ಮಹಿಳಾ ಸೇನಾಧಿಕಾರಿಗಳು ಗರಿಷ್ಠ ಎರಡು ಮಕ್ಕಳ ಮಿತಿಯೊಳಗೆ ಪ್ರತಿ ಶಿಶುವಿಗೆ 180 ದಿನಗಳ ತಾಯ್ತನದ ರಜೆಯನ್ನು ಪಡೆಯುತ್ತಿದ್ದಾರೆ. ವೃತ್ತಿ ಜೀವನದ ಒಟ್ಟು ಸೇವಾವಧಿಯಲ್ಲಿ 360 ದಿನಗಳ ಮಕ್ಕಳ ಪಾಲನಾ (ಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು) ರಜೆಯನ್ನು ಅವರು ಪಡೆಯುತ್ತಿದ್ದಾರೆ.
ಮಹಿಳಾ ಸೇನಾಧಿಕಾರಿಗಳಿಗೆ ಶಿಶು ದತ್ತು ಸ್ವೀಕಾರ ರಜೆ ಕೂಡಾ ಇರುತ್ತದೆ. ಒಂದು ವರ್ಷಕ್ಕಿಂತ ಕೆಳಗಿನ ಪ್ರಾಯದ ಮಗುವಿನ ದತ್ತು ಸ್ವೀಕಾರ ಸಿಂಧುವಾದ ದಿನಾಂಕದಿಂದ 180 ದಿನಗಳ ಕಾಲ ಅವರು ಶಿಶು ದತ್ತು ಸ್ವೀಕಾರದ ರಜೆ ಲಭ್ಯವಾಗಲಿದೆ.
ರಕ್ಷಣಾ ಸಚಿವಾಲಯದ ನೂತನ ನಿರ್ಧಾರದಿಂದಾಗಿ ಇನ್ನು ಮುಂದೆ ಈ ರಜಾ ನಿಯಮಗಳು ಸೇನೆಯಲ್ಲಿರುವ ಎಲ್ಲಾ ಮಹಿಳಾ ಯೋಧರಿಗೂ ಅನ್ವಯವಾಗಲಿದೆ.







