ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಆರೋಪಿಗೆ ಸಂಬಂಧಿಸಿದ ಕಡತ ನಾಪತ್ತೆ: ‘ಇದು ಗಂಭೀರ ವಿಷಯ’ ಎಂದು ತಿಹಾರ್ ಜೈಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದಿಲ್ಲಿ ನ್ಯಾಯಾಲಯ

ಸಾಂದರ್ಭಿಕ ಚಿತ್ರ | pc : freepik.com
ಹೊಸದಿಲ್ಲಿ: ಸದ್ಯ ಜೈಲಿನಲ್ಲಿರುವ ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಗೆ ಸಂಬಂಧಿಸಿದ ಸುರಕ್ಷತೆಯ ಸಂಗತಿಗಳ ಬಗೆಗಿನ ತನಿಖಾ ಕಡತ ನಾಪತ್ತೆಯಾಗಿರುವುದು ‘ಗಂಭೀರ ವಿಷಯ’ ಎಂದು ಸೋಮವಾರ ಕಳವಳ ವ್ಯಕ್ತಪಡಿಸಿದ ದಿಲ್ಲಿ ನ್ಯಾಯಾಲಯವೊಂದು, ಆ ಕಡತವನ್ನು ಪತ್ತೆ ಹಚ್ಚುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
“ನ್ಯಾಯಾಲಯ ಬಯಸಿರುವ ಮೂಲ ವರದಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ” ಎಂದು ತಿಹಾರ್ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ನ್ಯಾಯಾಧೀಶ ಸಂಜಯ್ ಜಿಂದಾಲ್ ಜುಲೈ 7ರೊಳಗೆ ಈ ಕುರಿತು ವರದಿ ಸಲ್ಲಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ಇತ್ತೀಚಿನ ವಿಚಾರಣೆಯ ವೇಳೆ ಆರೋಪಿ ಜೇಮ್ಸ್ ಎತ್ತಿರುವ ಪ್ರಶ್ನೆಗಳು ಹಾಗೂ ವ್ಯಕ್ತಪಡಿಸಿರುವ ಕಳವಳಗಳ ಗಂಭೀರತೆಯನ್ನು ಪರಿಗಣಿಸಿದಾಗ, ಆಗಸ್ಟ್ 29, 2019ರಂದು ಸಲ್ಲಿಸಲಾಗಿದ್ದ ವರದಿಯನ್ನು ಆಧರಿಸಿ ನಡೆದಿದ್ದ ತನಿಖೆಯ ಕಡತವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬುದು ತೀರಾ ಕಳವಳಕಾರಿ ಸಂಗತಿಯಾಗಿದೆ” ಎಂದು ತಿಹಾರ್ ಜೈಲು ಸಿಬ್ಬಂದಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
“ಮೇಲಿನ ತನಿಖಾ ಕಡತವನ್ನು ಪತ್ತೆ ಹಚ್ಚಿ, ಅದನ್ನು ಹಾಜರುಪಡಿಸುವಂತೆ ತಿಹಾರ್ ಜೈಲಿನ ಪ್ರಧಾನ ನಿರ್ದೇಶಕರಿಗೆ ಸೂಚಿಸಬೇಕು. ಒಂದು ವೇಳೆ, ಈ ಪ್ರಕರಣದ ಕಡತ ಆಗಲೂ ಪತ್ತೆಯಾಗದಿದ್ದರೆ, ಮುಂದಿನ ವಿಚಾರಣಾ ದಿನಾಂಕದಂದು ಈ ತನಿಖಾ ಕಡತ ಪತ್ತೆಯಾಗದಿರಲು ಕಾರಣವಾಗಿರುವ ಸಂಗತಿಗಳು ಹಾಗೂ ಸನ್ನಿವೇಶಗಳ ಕುರಿತು ವರದಿಯೊಂದನ್ನು ಸಲ್ಲಿಸಬೇಕು” ಎಂದೂ ನ್ಯಾಯಾಧೀಶರು ಸೂಚಿಸಿದರು. ಅಲ್ಲಿಯವರೆಗೆ ಆರೋಪಿ ಜೇಮ್ಸ್ ರ ಸುರಕ್ಷತೆ ಹಾಗೂ ಭದ್ರತೆಗೆ ಸಂಬಂಧಿಸಿದ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳು ಮುಂದುವರಿಯಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಜೈಲಿನೊಳಗೆ ತನಗೆ ಏರ್ಪಡಿಸಬೇಕಿರುವ ಭದ್ರತಾ ವ್ಯವಸ್ಥೆಗಳ ಕುರಿತು ಆಗಸ್ಟ್ 29, 2019ರ ತನಿಖಾ ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳನ್ನು ಮರುಪರಿಶೀಲಿಸಬೇಕು ಎಂದು ಆರೋಪಿ ಜೇಮ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಧೀಶರು ಈ ನಿರ್ದೇಶನ ನೀಡಿದರು.
ಸುಮಾರು ಆರು ವರ್ಷಗಳ ಅಂತರದ ಬಳಿಕ ಆರೋಪಿ ಜೇಮ್ಸ್ ನಿಂದ ಈ ಅರ್ಜಿ ಸಲ್ಲಿಕೆಯಾಗಿದೆ ಎಂದು ಜೈಲು ಅಧಿಕಾರಿಗಳು ನ್ಯಾಯಾಲಯದೆದುರು ವಾದ ಮಂಡಿಸಿದ್ದರು.