15 ವರ್ಷಗಳಿಂದ ಮಕ್ಕಳಿಗೆ ಪುಸ್ತಕಗಳನ್ನು ಖರೀದಿಸಲು ನೆರವಾದ ಮೌಲಾನಾರ ʼಉಳಿತಾಯʼ ಉಪಕ್ರಮ!

ಸಾಂದರ್ಭಿಕ ಚಿತ್ರ (Image by user6702303 on Freepik)
ಮುಂಬೈ: ಮಕ್ಕಳು ಸ್ಮಾರ್ಟ್ಫೋನ್ಗಳು, ಗ್ಯಾಜೆಟ್ಗಳು ಮತ್ತು ಆನ್ಲೈನ್ ಗೇಮ್ಗಳಿಗೆ ಅಂಟಿಕೊಂಡಿರುವ ಈ ಸಮಯದಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ (ಹಿಂದಿನ ಔರಂಗಾಬಾದ್) ಮೌಲಾನಾವೋರ್ವರು ಮಕ್ಕಳು ಹಣವನ್ನು ಸಂಗ್ರಹಿಸಲು ಮತ್ತು ಅದರಿಂದ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುವಂತೆ 50,000ಕ್ಕೂ ಅಧಿಕ ಪಿಗ್ಗಿ ಬ್ಯಾಂಕ್ಗಳನ್ನು(ಹಣ ಕೂಡಿಡುವ ಗೋಲಕ) ವಿತರಿಸಿದ್ದಾರೆ. ಈ ಉಪಕ್ರಮವು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ ಎಂದು deccanherald.com ವರದಿ ಮಾಡಿದೆ.
ರೀಡ್ ಆ್ಯಂಡ್ ಲೀಡ್ ಫೌಂಡೇಷನ್ನ ಅಧ್ಯಕ್ಷರಾಗಿರುವ ಮೌಲಾನಾ ಮಿರ್ಝಾ ಅಬ್ದುಲ್ ಖಯ್ಯೂಮ್ ನದ್ವಿ ಅವರು ‘ಹಣ ಉಳಿಸಿ, ಪುಸ್ತಕಗಳನ್ನು ಓದಿ’ ಎಂಬ ವಿಶಿಷ್ಟ ಉಪಕ್ರಮವನ್ನು ಪ್ರಾರಂಭಿಸಿದ್ದು, ಇದರಡಿ ಶಾಲಾ ಮಕ್ಕಳಿಗೆ ʼಪಿಗ್ಗಿ ಬ್ಯಾಂಕ್ʼಗಳನ್ನು ವಿತರಿಸಲಾಗುತ್ತದೆ.
‘ಪುಸ್ತಕಗಳು ನಮ್ಮ ಅತ್ಯುತ್ತಮ ಸ್ನೇಹಿತರು. ಹೊಸ ಪೀಳಿಗೆಯು ಪುಸ್ತಕಗಳನ್ನು ಪ್ರೀತಿಸುವಂತೆ ನಾವು ನೋಡಿಕೊಳ್ಳಬೇಕು. ನಮ್ಮ ಉಪಕ್ರಮವು ಕೇವಲ ಒಂದು ಸಣ್ಣ ಪ್ರಯತ್ನವಾಗಿದೆ. ಕಳೆದ 15 ವರ್ಷಗಳಿಂದಲೂ ಅದನ್ನು ನಾವು ಮಾಡುತ್ತಿದ್ದೇವೆ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನದ್ವಿ ಹೇಳಿದರು.
ಈ ಕಾರ್ಯಕ್ರಮವು ಆರ್ಥಿಕ ಸಾಕ್ಷರತೆಯನ್ನು ಸಾಹಿತ್ಯದ ಪ್ರಚಾರದೊಂದಿಗೆ ಏಕೀಕರಿಸಿದೆ.
ಮರಿಯಂ ಮಿರ್ಝಾ ಮೊಹಲ್ಲಾ ಗ್ರಂಥಾಲಯದ ಸಹಯೋಗದಿಂದಿಗೆ ನಡೆಸಲಾಗುತ್ತಿರುವ ಈ ಅಭಿಯಾನವು ಪ್ರೌಢಶಾಲಾ ಮಕ್ಕಳಿಗೆ ಉಚಿತ ಪಿಗ್ಗಿ ಬ್ಯಾಂಕ್ಗಳನ್ನು ವಿತರಿಸುವುದನ್ನು ಒಳಗೊಂಡಿದ್ದು,ಪುಸ್ತಕಗಳನ್ನು ಖರೀದಿಸುವ ಏಕೈಕ ಉದ್ದೇಶಕ್ಕಾಗಿ ಹಣವನ್ನು ಉಳಿಸಲು ಅವರನ್ನು ಪ್ರೋತ್ಸಾಹಿಸುತ್ತದೆ.
‘ಔರಂಗಾಬಾದ್ನಾದ್ಯಂತ ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೆ 50,000ಕ್ಕೂ ಅಧಿಕ ಪಿಗ್ಗಿ ಬ್ಯಾಂಕ್ಗಳನ್ನು ವಿತರಿಸುವ ಮೂಲಕ ಪ್ರತಿಷ್ಠಾನವು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಗರಾದಾದ್ಯಂತ ವಿವಿಧ ಶಾಲೆಗಳ ಒಂದು ಲಕ್ಷ ವಿದ್ಯಾರ್ಥಿಗಳನ್ನು ತಲುಪುವುದು ನಮ್ಮ ಮಹತ್ವಾಕಾಂಕ್ಷೆಯ ದೀರ್ಘಾವಧಿಯ ಗುರಿಯಾಗಿದೆ. ಪೋಷಕರು ಮತ್ತು ಸ್ಥಳೀಯರು ಈ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ’ ಎಂದು ನದ್ವಿ ತಿಳಿಸಿದರು.
ಅಭಿಯಾನದಡಿ ಇತ್ತೀಚಿಗೆ ಛತ್ರಪತಿ ಸಂಭಾಜಿನಗರದ ಔರಂಗಪುರದಲ್ಲಿಯ ಜಿಲ್ಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳಿಗೆ 108 ಪಿಗ್ಗಿ ಬ್ಯಾಂಕ್ಗಳನ್ನು ವಿತರಿಸಲಾಗಿದೆ. ದೀಪಾವಳಿಯ ರಜಾದಿನಗಳಲ್ಲಿ ಪೋಷಕರು ಮತ್ತು ಸಂಬಂಧಿಕರು ನೀಡುವ ಹಣವನ್ನು ಈ ಪಿಗ್ಗಿ ಬ್ಯಾಂಕ್ಗಳಲ್ಲಿ ಸಂಗ್ರಹಿಸುವಂತೆ ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾಗಿ ಆಗ್ರಹಿಸಲಾಗಿದೆ.
ಟಿವಿ ವೀಕ್ಷಿಸುವ ಮತ್ತು ಇಂಟರ್ನೆಟ್ ಅನ್ನು ಜಾಲಾಡುವ ಅಭ್ಯಾಸವು ವಿದ್ಯಾರ್ಥಿಗಳನ್ನು ಪುಸ್ತಕಗಳಿಂದ ದೂರ ಮಾಡಿದೆ ಎಂದು ಹೇಳಿದ ನದ್ವಿ,ಈ ಅಭ್ಯಾಸವು ಹೊರೆಯಲ್ಲ, ಏಕೆಂದರೆ ವಿದ್ಯಾರ್ಥಿಗಳು ತಮ್ಮ ಪೋಷಕರು ನೀಡುವ ಪಾಕೆಟ್ ಮನಿಯಿಂದ ಉಳಿಸುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ತಮ್ಮ ಉಳಿತಾಯದ ಹಣವನ್ನು ಖರ್ಚು ಮಾಡಲು ಅನುಕೂಲಕರ ಮಾರ್ಗವನ್ನು ಒದಗಿಸಲು ರೀಡ್ ಆ್ಯಂಡ್ ಲೀಡ್ ಫೌಂಡೇಷನ್ ದೀಪಾವಳಿ ರಜೆಗಳ ಬಳಿಕ ಶಾಲೆಗಳು ಪುನರಾರಂಭಗೊಂಡಾಗ ಶಾಲಾ ಆವರಣಗಳಲ್ಲಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಿದೆ ಎಂದು ನದ್ವಿ ಪ್ರಕಟಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮಕ್ಕೆ ಸಂಬಂಧಿಸಿದ ಅಥವಾ ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಪುಸ್ತಕಗಳ ಖರೀದಿಗಾಗಿ ತಮ್ಮ ಉಳಿತಾಯದ ಹಣವನ್ನು ಬಳಸುವಂತೆ ಉತ್ತೇಜಿಸಲಾಗುತ್ತದೆ, ಅವರು ನಗರದ ಯಾವುದೇ ಪುಸ್ತಕ ಪ್ರದರ್ಶನದಿಂದ ಪುಸ್ತಕಗಳನ್ನು ಖರೀದಿಸಬಹುದು.
ಮೌಲಾನಾ ಆಝಾದ್ ಕಾಲೇಜಿನಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ನದ್ವಿಯವರ ಪುತ್ರಿ ಮರಿಯಂ ಮಿರ್ಝಾ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮೊಹಲ್ಲಾ ಗ್ರಂಥಾಲಯ ಆರಂಭಿಸಿದ್ದಕ್ಕಾಗಿ ಮಹಾರಾಷ್ಟ್ರ ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.







