ನಿಮಿಷ ಪ್ರಿಯಾ ಬಿಡುಗಡೆಗೆ ಮಧ್ಯಸ್ಥಿಕೆ : ಸಂಘಪರಿವಾರದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಎ ಪಿ ಅಬೂಬಕರ್ ಮುಸ್ಲಿಯಾರ್!

Photo | mediaone
ಕೋಝಿಕ್ಕೋಡು : ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಕೆಲ ಸಂಘಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಗುರಿಯಾಗಿಸಿಕೊಂಡಿದ್ದಾರೆ.
ಹಿಂದುತ್ವವಾದಿ ಪ್ರತೀಶ್ ವಿಶ್ವನಾಥ್ ಎಂಬವರು ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಪಾತ್ರವನ್ನು ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದಾರೆ. ಕಾಂತಪುರಂ ಅವರಿಗೆ ಯೆಮನ್ನ ಹೌತಿ ಗುಂಪುಗಳ ಜೊತೆ ಏನಾದರೂ ಸಂಬಂಧವಿದೆಯೆ? ಮಧ್ಯಸ್ಥಿಕೆಯಲ್ಲಿ ಸರಕಾರದ ಪಾತ್ರವಿದೆಯೆ? ಇದು ಅಧಿಕೃತ ರಾಜತಾಂತ್ರಿಕ ಮಾತುಕತೆನಾ? ಎಂದು ಪ್ರಶ್ನಿಸಿದ್ದಾರೆ. ಮತಾಂತರ ಮಾಡಿ ಸಿರಿಯಾಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಲಾಗುವ ಮಹಿಳೆಯರಿಗಾಗಿ ಇದೇ ರೀತಿಯ ಪ್ರಯತ್ನಗಳನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆರಿಫ್ ಹುಸೈನ್ ಎಂಬವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ, ಕಾಂತಪುರಂ ಅವರಿಗೆ ಯೆಮೆನ್ನ ಹೌತಿ ಗುಂಪುಗಳೊಂದಿಗೆ ಶಂಕಾಸ್ಪದ ಸಂಪರ್ಕವಿದೆ. ಇದರ ತನಿಖೆ ಅಗತ್ಯ, ಕಾಂತಪುರಂ ಅವರು ಇಸ್ಲಾಂ ಧರ್ಮಕ್ಕೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕ್ರೈಸ್ತ ಸಂಘಟನೆ ‘ಕೆಎಎಸ್ʼ ನಾಯಕ ಕೆವಿನ್ ಪೀಟರ್ ಪ್ರತಿಕ್ರಿಯಿಸಿ, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಸಾರ್ವಜನಿಕವಾಗಿ ಪ್ರಶಂಸಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಇಂತಹ ಟೀಕೆಗಳ ಹೊರತಾಗಿಯೂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಸೇರಿದಂತೆ ಹಲವಾರು ನಾಯಕರು ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕಾಂತಪುರಂ ಅವರ ಮಧ್ಯಸ್ಥಿಕೆಯನ್ನು ಶ್ಲಾಘಿಸಿದ್ದಾರೆ.







