ಮೀರತ್: ಅಗ್ನಿ ಅವಘಡಕ್ಕೆ ನಾಲ್ವರು ಮಕ್ಕಳು ಬಲಿ

Photo: NDTV
ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯ ಪಲ್ಲವಪುರಂ ಪ್ರದೇಶದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ಅವರ ಹೆತ್ತವರಿಗೆ ಗಂಭೀರವಾದ ಸುಟ್ಟಗಾಯಗಳಾಗಿವೆ. ಪಲ್ಲವಪುರಂನಲ್ಲಿರುವ ಜನತಾ ಕಾಲನಿಯಲ್ಲಿ ಶನಿವಾರ ಈ ದುರಂತ ಸಂಭವಿಸಿದೆ
ಮನೆಯವರು ಮೊಬೈಲ್ ಫೋನ್ ಗೆ ವಿದ್ಯುತ್ ಚಾರ್ಜ್ ಮಾಡುತ್ತಿದ್ದಾಗ, ಶಾರ್ಟ್ ಸರ್ಕಿಟ್ ಉಂಟಾಗಿ ಮನೆಗೆ ಬೆಂಕಿ ಹತ್ತಿಕೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸಾರಿಕಾ (10), ನಿಹಾರಿಕಾ (8), ಶಂಕರ್ ಯಾನೆ ಗೋಲು (6) ಹಾಗೂ ಕಾಲು (4) ಎಂದು ಗುರುತಿಸಲಾಗಿದೆ. ಅವರ ಹೆತ್ತವರಾದ ಜಾನಿ (41) ಹಾಗೂ ಬಬಿತಾ (37) ಅವರಿಗೆ ಸುಟ್ಟಗಾಯಗಳಾಗಿದ್ದವು.
ಅಗ್ನಿ ದುರಂತದ ಬಳಿಕ ಮನೆಯಲ್ಲಿದ್ದವರೆಲ್ಲರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಆದರೆ ನಾಲ್ವರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕೊನೆಯುಸಿರೆಳೆದರೆಂದು ಮೂಲಗಳು ತಿಳಿಸಿವೆ.
ಬೆಂಕಿ ಅವಘಡದಲ್ಲಿ ಸುಟ್ಟ ಗಾಯಗಳಾಗಿರುವ ಜಾನಿ ಅಪಾಯದಿಂದ ಪಾರಾಗಿದಾರೆ. ಆದರೆ ಅವರ ಪತ್ನಿ ಬಬಿತಾರ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.





