ದಿಲ್ಲಿಯಲ್ಲಿ ಜನಾಂಗೀಯ ನಿಂದನೆ ಎದುರಿಸಿದ ಮೇಘಾಲಯದ ಮಹಿಳೆ

Photo Credit : instagram.com \ ___insolitude
ಹೊಸದಿಲ್ಲಿ,ಅ. 5: ದಿಲ್ಲಿಯಲ್ಲಿ ತಾನು ಜನಾಂಗೀಯ ನಿಂದನೆಯನ್ನು ಎದುರಿಸಿದ್ದೇನೆ ಎಂದು ಈಶಾನ್ಯ ರಾಜ್ಯ ಮೇಘಾಲಯದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ತಾನು ಒಂದೇ ದಿನ ಎರಡು ಬಾರಿ ಜನಾಂಗೀಯ ತಾರತಮ್ಯಕ್ಕೆ ಒಳಗಾದೆ- ಮೊದಲನೆಯದು ಕಮಲಾ ನಗರ್ನಲ್ಲಿ ಮತ್ತು ಬಳಿಕ ಮೆಟ್ರೋ ಸ್ಟೇಶನ್ನಲ್ಲಿ ಎಂಬುದಾಗಿ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
‘‘ನಾನು ಒಂದು ಕೆಲಸಕ್ಕಾಗಿ ಕಮಲಾ ನಗರಕ್ಕೆ ಹೋದೆ. ನಾನು ನಡೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮೂರು- ನಾಲ್ಕು ಜನ ಪುರುಷರಿದ್ದರು. ಅವರು ಸ್ಕೂಟಿಯೊಂದರಲ್ಲಿ ಕುಳಿತಿದ್ದರು. ನಾನು ಹಾದು ಹೋಗುತ್ತಿರುವಾಗ, ಒಬ್ಬ ವ್ಯಕ್ತಿ ಹೇಳಿದನು, ‘ಸೆಂಗ್ ಚೊಂಗ್’. ಅದನ್ನು ಕೇಳಿ ನಾನು ಹಿಂದಿರುಗಿ ನೋಡಿದೆ. ಆಗ ಅವರೆಲ್ಲರೂ ನಗಲು ಆರಂಭಿಸಿದರು. ಅವರು ಏನು ಹೇಳಿದರೋ ಅದನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ನನ್ನತ್ತ ನೋಡಿ ನಗುತ್ತಿದ್ದರು. ನಾನು ಮೌನವಾಗಿ ಮುಂದೆ ಹೋದೆ’’ ಎಂಬುದಾಗಿ ಅವರು ಬರೆದಿದ್ದಾರೆ.
ಕೆಲವು ನಿಮಿಷಗಳ ಬಳಿಕ, ಮೆಟ್ರೋ ರೈಲನ್ನು ಹತ್ತಿದಾಗ ಇನ್ನೊಬ್ಬ ವ್ಯಕ್ತಿ ತನ್ನತ್ತ ಜನಾಂಗೀಯ ನಿಂದನೆಯ ಮಾತುಗಳನ್ನು ಆಡಿದನು ಎಂದು ಆ ಮಹಿಳೆ ಆರೋಪಿಸಿದ್ದಾರೆ. ‘‘ಅವನು ನನ್ನನ್ನು ಚಿಂಗ್ ಚೊಂಗ್ ಚೀನಾ ಎಂಬುದಾಗಿ ಕರೆದನು. ಒಂದೇ ದಿನದಲ್ಲಿ ಎರಡು ಬಾರಿ ನಾನು ಜನಾಂಗೀಯ ನಿಂದನೆಗೆ ಒಳಗಾದೆ. ನಾನು ಅವನತ್ತ ದಿಟ್ಟಿಸಿ ನೋಡಿದೆ. ಏನನ್ನೂ ಹೇಳಲಿಲ್ಲ’’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
‘‘ನನ್ನದೇ ದೇಶದಲ್ಲಿ ನಾನು ಪರಕೀಯಳು ಎನ್ನುವ ಭಾವನೆಯನ್ನು ನನ್ನಲ್ಲಿ ಮೂಡಿಸಲಾಯಿತು. ಇದು ನನ್ನನ್ನು ತುಂಬಾ ಘಾಸಿಗೊಳಿಸಿತು. ನಾನು ವಿವಿಧ ದೇಶಗಳಿಗೆ ಹೋಗಿದ್ದೇನೆ. ಆದರೆ ಅಲ್ಲಿನವರು ನಾನು ಪರಕೀಯಳು ಎಂಬುದಾಗಿ ಭಾವಿಸುವಂತೆ ಮತ್ತು ನಾನು ಅಲ್ಲಿ ಅನಪೇಕ್ಷಿತಳು ಎನ್ನುವಂತೆ ಯಾವತ್ತೂ ವರ್ತಿಸಲಿಲ್ಲ. ಆದರೆ ನನ್ನದೇ ದೇಶದಲ್ಲಿ, ನಾನು ಇಲ್ಲಿಗೆ ಸೇರಿದವಳಲ್ಲ ಎನ್ನುವ ಭಾವನೆ ನನ್ನಲ್ಲಿ ಮೂಡುವಂತೆ ನನ್ನದೇ ದೇಶದ ಜನರು ಮಾಡಿದ್ದಾರೆ’’ ಎಂದು ಅವರು ಹೇಳಿದ್ದಾರೆ.







