ಹನಿಮೂನ್ಗೆ ತೆರಳಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಬುಡಕಟ್ಟು ಜನರ ಜನಾಂಗೀಯ ನಿಂದನೆ, ಕಳ್ಳಸಾಗಣೆ ನಿರೂಪಣೆಗೆ ಬಳಸಿದ ಬಲಪಂಥೀಯರು!

ರಾಜಾ ರಘುವಂಶಿ ಮತ್ತು ಸೋನಂ (Photo: X)
ಹೊಸದಿಲ್ಲಿ : ಮೇಘಾಲಯದಲ್ಲಿ ನಡೆದ ಇಂದೋರ್ ಮೂಲದ ರಾಜಾ ರಘುವಂಶಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪತ್ನಿಯೇ ಬಾಡಿಗೆ ಕೊಲೆಗಾರರ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬುದು ತನಿಖೆಯ ವೇಳೆ ಬಯಲಾಗಿದೆ. ಆದರೆ, ದೇಶದಲ್ಲಿ ಭಾರಿ ಸುದ್ದಿಯಾಗಿದ್ದ ಈ ಪ್ರಕರಣವನ್ನು ಕೆಲ ಬಲಪಂಥೀಯರು ಬುಡಕಟ್ಟು ಜನರ ಜನಾಂಗೀಯ ನಿಂದನೆ ಮತ್ತು ಬಾಂಗ್ಲಾದೇಶದ ವಿರುದ್ಧದ ಆರೋಪಕ್ಕೆ ಬಳಸಿಕೊಂಡಿರುವುದು ಬಹಿರಂಗವಾಗಿದೆ.
ರಾಜಾ ರಘುವಂಶಿ ಮತ್ತು ಸೋನಂ ನಾಪತ್ತೆ ಬಗ್ಗೆ ವರದಿ ಮಾಡಿದ್ದ ಸುಳ್ಳು ಸುದ್ದಿಗೆ ಕುಖ್ಯಾತಿ ಪಡೆದಿರುವ OpIndia ಎಂಬ ವೆಬ್ಸೈಟ್ ಪತಿಯ ಕೊಲೆ ಬಳಿಕ ಪತ್ನಿಯನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಿರುವ ಶಂಕೆಯಿದೆ ಎಂದು ವರದಿ ಮಾಡಿತ್ತು.
ಇದಲ್ಲದೆ ಕೆಲ ಬಲಪಂಥೀಯರು ಈಶಾನ್ಯ ರಾಜ್ಯ ಮೇಘಾಲಯದ ಬಗ್ಗೆ ತೀವ್ರವಾಗಿ ಜನಾಂಗೀಯ ನಿಂದನೆ ಮಾಡಿದ್ದರು. ಈ ಪ್ರದೇಶದ ಬುಡಕಟ್ಟು ಜನಾಂಗದವರು ಎಷ್ಟು ಕ್ರೂರರು ಮತ್ತು ಕಾಶ್ಮೀರದಂತಾಗುವುದನ್ನು ಹೇಗೆ ತಪ್ಪಿಸಬೇಕು ಎಂದು ಎಕ್ಸ್ ನಲ್ಲಿ ಪೋಸ್ಟ್ ಮತ್ತು ಕಮೆಂಟ್ಗಳನ್ನು ಮಾಡಿದ್ದರು.
ಇದಲ್ಲದೆ ಬಾಂಗ್ಲಾದೇಶಕ್ಕೆ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಕೆಲ ಬಲಪಂಥೀಯರು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದರು.
"ಈ ಘಟನೆಯು ಈಶಾನ್ಯ ರಾಜ್ಯದ ವಿರುದ್ಧ ತೀವ್ರವಾದ ಜನಾಂಗೀಯ ಟೀಕೆಯನ್ನು ಹುಟ್ಟು ಹಾಕಿತ್ತು. ಈ ಪ್ರದೇಶದ ಬುಡಕಟ್ಟು ಜನಾಂಗದವರು ಎಷ್ಟು ಕ್ರೂರರು ಮತ್ತು ಕಾಶ್ಮೀರದಂತಾಗುವುದರಿಂದ ಈಶಾನ್ಯ ರಾಜ್ಯವನ್ನು ಹೇಗೆ ತಪ್ಪಿಸಬೇಕು ಎಂಬುದರ ಕುರಿತು ಟ್ವಿಟರ್ನಲ್ಲಿ ವ್ಯಾಪಕವಾಗಿ ಕಮೆಂಟ್ಗಳು ವ್ಯಕ್ತವಾಗಿದ್ದವು. ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಕುರಿತು ಸಂಘಿಗಳು ತಮ್ಮದೇ ಆದ ವ್ಯಾಖ್ಯಾನ ಮಾಡಿದ್ದರು ಎಂದು ಅಂಗ್ಶುಮನ್ ಚೌಧರಿ ಎಂಬವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್, ಮೇಘಾಲಯದಲ್ಲಿ ನಾಪತ್ತೆಯಾಗಿದ್ದ ಸೋನಮ್ ರಘುವಂಶಿ ಅವರನ್ನು ಉತ್ತರ ಪ್ರದೇಶದ ಘಾಝಿಪುರದಲ್ಲಿ ಪತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಆದರೆ OpIndia_com ಎಂಬ ವೆಬ್ಸೈಟ್ ಪತ್ನಿಯನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ ಎಂದು ಈ ಹಿಂದೆ ವರದಿ ಮಾಡಿತ್ತು ಎಂಬುದನ್ನು ಸಾಕ್ಷಿ ಸಹಿತ ಬಹಿರಂಗಪಡಿಸಿದ್ದಾರೆ.
ಸೋನಮ್ಗೆ ರಾಜ್ ಕುಶ್ವಾಹ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಮೇಘಾಲಯದಲ್ಲಿ ಹನಿಮೂನ್ಗೆ ತೆರಳಿದ ವೇಳೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರ ಸಹಾಯದಿಂದ ಪತಿಯನ್ನು ಕೊಲೆ ಮಾಡಿಸಿದ್ದಾಳೆ ಎಂಬುದನ್ನು ಪೊಲೀಸರು ತನಿಖೆ ವೇಳೆ ಬಯಲಿಗೆಳೆದಿದ್ದಾರೆ. ಇದರಿಂದ ಕೊಲೆ ಪ್ರಕರಣವೊಂದರ ವಾಸ್ತವಾಂಶ ಬಯಲಾಗಿದೆ.