ಮೇಘಾಲಯ: ಸಿಎಎ ವಿರೋಧಿ ಪ್ರತಿಭಟನೆಯ ನಂತರ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Photo: thehindu.com
ಶಿಲ್ಲಾಂಗ್: ಖಾಸಿ ವಿದ್ಯಾರ್ಥಿಗಳ ಸಂಘಟನೆಯು ಇಚಾಮತಿಯಲ್ಲಿ ಕರೆ ನೀಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಸಮಾವೇಶದ ಬಳಿಕ ಇಬ್ಬರು ವ್ಯಕ್ತಿಗಳು ಮೇಘಾಲಯದ ಪೂರ್ವ ಖಾಸಿ ಗಿರಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಗಳನ್ನು ಎಸಾನ್ ಸಿಂಗ್ ಹಾಗೂ ಸುಜಿತ್ ದತ್ತ ಎಂದು ಗುರುತಿಸಲಾಗಿದ್ದು, ಈ ಇಬ್ಬರೂ ಆದಿವಾಸಿಯೇತರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರಿಬ್ಬರ ಮೃತದೇಹಗಳು ಬಾಂಗ್ಲಾದೇಶದೊಂದಿಗಿನ ಮೇಘಾಲಯದ ಗಡಿಗೆ ಸನಿಹದಲ್ಲಿರುವ ಇಚಾಮತಿ ಮತ್ತು ಡಾಲ್ಡಾದಲ್ಲಿ ಪತ್ತೆಯಾಗಿವೆ. ಈ ಪ್ರದೇಶಗಳು ಶೆಲ್ಲಾ ವಿಧಾನಸಭಾ ವ್ಯಾಪ್ತಿಗೆ ಸೇರಿವೆ ಎಂದು ಹೇಳಲಾಗಿದೆ.
ಮೃತದೇಹಗಳ ಬಳಿ ಕಲ್ಲುಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೂರ್ವ ಖಾಸಿ ಗಿರಿಯ ಪೊಲೀಸ್ ವರಿಷ್ಠಾಧಿಕಾರಿ ರಿತುರಾಜ್ ರವಿ, ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ಇನ್ನಷ್ಟೆ ನಡೆಸಬೇಕಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ತಂಡಗಳನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಾವುಗಳಿಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಸಮಾವೇಶಕ್ಕೂ ಯಾವುದಾದರೂ ಸಂಬಂಧವಿದೆಯೆ ಎಂಬುದನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಪೂರ್ವ ಖಾಸಿ ಗಿರಿಯ ಜಿಲ್ಲಾಧಿಕಾರಿ ಎಸ್.ಸಿ. ಸಂಧು ಹೇಳಿದ್ದಾರೆ.
ಇಚಾಮತಿ ಅನುಸೂಚಿತ ಪ್ರದೇಶವಾಗಿದ್ದು, ಇದು ಪೌರತ್ವ ತಿದ್ದುಪಡಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿದೆ.







