GHADC ನಾಮಪತ್ರ ಪ್ರಕ್ರಿಯೆ ನಡುವೆ ಉದ್ವಿಗ್ನತೆ | ಮೇಘಾಲಯದ ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಪೊಲೀಸ್ ಗುಂಡಿನ ದಾಳಿ: ಇಬ್ಬರು ಮೃತ್ಯು, ಕರ್ಫ್ಯೂ

Photo : Pixabay
ಶಿಲ್ಲಾಂಗ್: ಮೇಘಾಲಯದ ಪಶ್ಚಿಮ ಗಾರೋ ಬೆಟ್ಟಗಳ ಜಿಲ್ಲೆಯಲ್ಲಿ ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (GHADC) ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಸಂದರ್ಭ ಉಂಟಾದ ಉದ್ವಿಗ್ನತೆಯಲ್ಲಿ ಮಂಗಳವಾರ ಮುಂಜಾನೆ ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಬಿನಾಂಗ್ ಪ್ರದೇಶದಲ್ಲಿ ಬುಡಕಟ್ಟು ಹಾಗೂ ಬುಡಕಟ್ಟು ಅಲ್ಲದ ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ್ದು, ಹಿಂಸಾತ್ಮಕ ಗುಂಪುಗಳನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಪಶ್ಚಿಮ ಗಾರೋ ಬೆಟ್ಟಗಳ ಪೊಲೀಸ್ ವರಿಷ್ಠಾಧಿಕಾರಿ ಅಬ್ರಹಾಂ ಟಿ. ಸಂಗ್ಮಾ ತಿಳಿಸಿದ್ದಾರೆ.
‘ಮೃತಪಟ್ಟ ಇಬ್ಬರೂ ಚಿಬಿನಾಂಗ್ ನಿವಾಸಿಗಳೇ. GHADC ಚುನಾವಣೆಗೆ ಸಂಬಂಧಿಸಿ ಬುಡಕಟ್ಟು ಜನರು ಮತ್ತು ಬುಡಕಟ್ಟು ಅಲ್ಲದವರ ನಡುವೆ ಘರ್ಷಣೆ ನಡೆದಿದೆ. ಕಾನೂನುಬಾಹಿರವಾಗಿ ಸೇರಿದ್ದ ಗುಂಪನ್ನು ಚದುರಿಸುವ ವೇಳೆ ಗುಂಡು ಹಾರಿಸಲಾಗಿದೆ’ ಎಂದು ಅವರು ಹೇಳಿದರು.
ಪ್ರದೇಶದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿ ಇದೆ ಎಂದು ಸಂಗ್ಮಾ ತಿಳಿಸಿದ್ದಾರೆ. ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಪಶ್ಚಿಮ ಗಾರೋ ಬೆಟ್ಟಗಳಾದ್ಯಂತ ಮಂಗಳವಾರ ಇಡೀ ದಿನ ಕರ್ಫ್ಯೂ ಜಾರಿಗೊಳಿಸಿದೆ.
ಹೆಚ್ಚುವರಿ ಭದ್ರತಾ ಪಡೆಗಳನ್ನು ಕೋರಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಗಾರಿಕೆ, ಹಲ್ಲೆ ಮತ್ತು ತಪ್ಪು ಮಾಹಿತಿಯ ಪ್ರಸರಣದ ವರದಿಗಳ ಹಿನ್ನೆಲೆ ಮೇಘಾಲಯ ಸರ್ಕಾರ ಮಂಗಳವಾರದಿಂದ ಜಿಲ್ಲೆಯಲ್ಲಿ 48 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಆದರೆ ಕರೆಗಳು ಮತ್ತು ಎಸ್ಎಂಎಸ್ ಸೇವೆಗಳು ಮುಂದುವರಿಯಲಿವೆ.
ಉದ್ವಿಗ್ನತೆಯನ್ನು ಶಮನಗೊಳಿಸಲು ಉಪ ಆಯುಕ್ತ ವಿಭೋರ್ ಅಗರ್ವಾಲ್ ಅವರು ಮಂಗಳವಾರ ತುರಾದ ಸರ್ಕ್ಯೂಟ್ ಹೌಸ್ನಲ್ಲಿ ಚರ್ಚ್ ಮುಖಂಡರು, ಎನ್ಜಿಒ ಪ್ರತಿನಿಧಿಗಳು ಹಾಗೂ ಸ್ಥಳೀಯ ಅಭಿವೃದ್ಧಿ ಸಮಿತಿಗಳೊಂದಿಗೆ ಶಾಂತಿ ಸಮಿತಿ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 16ರವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಕೇಂದ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಎಪ್ರಿಲ್ 10ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ತುರಾದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಫುಲ್ಬರಿಯ ಮಾಜಿ ಶಾಸಕ ಎಸ್ತಮುರ್ ಮೋಮಿನ್ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
ಬುಡಕಟ್ಟು ಜನಾಂಗದವರಲ್ಲದವರು ಜಿಎಚ್ಎಡಿಸಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಅಥವಾ ಭಾಗವಹಿಸುವುದನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದರು.
ಫೆಬ್ರವರಿ 17ರಂದು ಜಿಎಚ್ಎಡಿಸಿ ಕಾರ್ಯಕಾರಿ ಸಮಿತಿಯು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಮಾನ್ಯ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತ್ತು.







