ಇಲ್ತಿಜಾ ಮುಫ್ತಿಯ ಇಬ್ಬರು ಪಿಎಸ್ಒ ಅಮಾನತು ವಿಪರ್ಯಾಸ, ಅನ್ಯಾಯ: ಮೆಹಬೂಬಾ ಮುಫ್ತಿ

ಇಲ್ತಿಜಾ ಮುಫ್ತಿ | PC : PTI
ಶ್ರೀನಗರ: ತನ್ನ ಪುತ್ರಿ (ಇಲ್ತಿಜಾ)ಯ ಇಬ್ಬರು ಖಾಸಗಿ ಭದ್ರತಾ ಅಧಿಕಾರಿ (ಪಿಎಸ್ಒ)ಗಳನ್ನು ಆಡಳಿತ ಅಮಾನತುಗೊಳಿಸಿದೆ ಎಂದು ಪಿಡಿಪಿ ವರಿಷ್ಠೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೋಮವಾರ ಆರೋಪಿಸಿದ್ದಾರೆ.
ಕಸ್ಟಡಿಯಲ್ಲಿ ಪೊಲೀಸ್ ಚಿತ್ರಹಿಂಸೆ ಆರೋಪದ ಬಳಿಕ ಆತ್ಮಹತ್ಯೆಗೆ ಶರಣಾದ 25 ವರ್ಷದ ಮಖಾನ್ ದಿನ್ ಕುಟುಂಬವನ್ನು ಭೇಟಿಯಾಗಲು ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರು ಕಥುವಾದ ಬಿಲಾವರ್ ಪ್ರದೇಶಕ್ಕೆ ತಲುಪಿದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಯಾವುದೇ ತಪ್ಪಿಲ್ಲದೆ ಇದ್ದರೂ ಇಲ್ತಿಜಾ ಅವರ ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ವಿಪರ್ಯಾಸ ಹಾಗೂ ಅನ್ಯಾಯ. ಅಪರಾಧಿಯಂತೆ ಗೃಬಂಧನದಲ್ಲಿ ಇರಿಸಿರುವ ಹೊರತಾಗಿಯೂ ಇಲ್ತಿಜಾ ಅವರು ಕಥುವಾ ತಲುಪಲು ಸಫಲವಾದ ಕಾರಣಕ್ಕೆ ಅವರಿಗೆ ಈ ಶಿಕ್ಷೆ ನೀಡಲಾಗಿದೆ ಎಂದು ಮೆಹಬೂಬಾ ಮುಫ್ತಿ ‘ಎಕ್ಸ್’ನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ರವಿವಾರ ಕಥುವಾದ ಬಿಲಾವರ್ ಪ್ರದೇಶ ತಲುಪುವಲ್ಲಿ ಸಫಲರಾಗಿದ್ದರು ಹಾಗೂ ಮಖಾನ್ ದಿನ್ ಕುಟುಂಬವನ್ನು ಭೇಟಿಯಾಗಿದ್ದರು.
ಇಲ್ತಿಜಾ ಅವರು ಮಖಾನ್ ದಿನ್ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಬಿಲಾವರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯ ವಿರುದ್ಧ ಕೂಡ ತನಿಖೆಗೆ ಆದೇಶಿಸಬೇಕು ಎಂದು ಕೂಡ ಅವರು ಒತ್ತಾಯಿಸಿದ್ದಾರೆ.





