"ಆರೋಪಿಗೆ ತಾನು ಪರಿಣಾಮ ಎದುರಿಸಬೇಕಿಲ್ಲ ಎನ್ನುವುದು ಚೆನ್ನಾಗಿ ಗೊತ್ತಿತ್ತು" : ಸಿಜೆಐ ಮೇಲೆ ಶೂ ಎಸೆತ ಪ್ರಕರಣದ ಬಗ್ಗೆ ಮೆಹಬೂಬ ಮುಫ್ತಿ ಪ್ರತಿಕ್ರಿಯೆ

ಮೆಹಬೂಬ ಮುಫ್ತಿ | Photo Credit : PTI
ಶ್ರೀನಗರ,ಅ.7: ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಬಿ.ಆರ್.ಗವಾಯಿ ಅವರತ್ತ ಶೂ ಎಸೆದಿದ್ದ ನ್ಯಾಯವಾದಿಗೆ ಅದಕ್ಕಾಗಿ ತಾನು ಯಾವುದೇ ಪರಿಣಾಮಗಳನ್ನು ಎದುರಿಸಬೇಕಾಗುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸವಿತ್ತು, ಹೀಗಾಗಿ ಈ ಘಟನೆಯು ‘ಬಿಜೆಪಿಯ ವಿಕಸಿತ ಭಾರತದ ಭಯಾನಕ ಚಿತ್ರ’ವಾಗಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಮಂಗಳವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈಗ ನ್ಯಾಯಾಲಯದ ಮುಂದಿರುವ ಪ್ರಶ್ನೆಯು ಕೇವಲ ಕಾನೂನಾತ್ಮಕವಲ್ಲ,ಅಸ್ತಿತ್ವದ್ದೂ ಆಗಿದೆ ಎಂದಿರುವ ಮುಫ್ತಿ, ಸಂವಿಧಾನವನ್ನು ರಕ್ಷಿಸಲು ನ್ಯಾಯಾಂಗವು ಎದ್ದು ನಿಲ್ಲುತ್ತದೆಯೇ ಅಥವಾ ಅಕ್ಷರಶಃ ಶೂ ಅಡಿ ತುಳಿಯಲ್ಪಡುತ್ತಿರುವಾಗ ಮೌನವಾಗಿರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಸಿಜೆಐ ಅವರತ್ತ ಎಸೆಯಲ್ಪಟ್ಟ ಶೂ 2047ರ ವೇಳೆಗೆ ಬಿಜೆಪಿಯ ವಿಕಸಿತ ಭಾರತ ಹೇಗೆ ಕಾಣಲಿದೆ ಎಂಬ ಭಯಾನಕ ಚಿತ್ರಣವನ್ನು ನೀಡಿದೆ. ದಾಳಿಕೋರ ತನ್ನ ವಿಷಾದನೀಯ ಕೃತ್ಯಕ್ಕಾಗಿ ತಾನು ಯಾವುದೇ ನಿಜವಾದ ಪರಿಣಾಮಗಳನ್ನು ಎದುರಿಸಬೇಕಿಲ್ಲ ಎಂಬ ನಿರ್ಲಜ್ಜ ವಿಶ್ವಾಸವನ್ನು ಹೊಂದಿದ್ದ. ಇದು ಗುಂಪು ಹಂತಕರಿಗೆ ಹಾರ ಹಾಕುವ, ಅತ್ಯಾಚಾರಿಗಳನ್ನು ಕ್ಷಮಿಸುವ ಮತ್ತು ದ್ವೇಷವನ್ನು ಪುರಸ್ಕರಿಸುವ ಗೋಡ್ಸೆಯ ಭಾರತದಲ್ಲಿ ‘ಹೊಸ ಸಾಮಾನ್ಯ’ವಾಗಿದೆ. ಎಷ್ಟೆಂದರೂ ಶೂ ಎಸೆದಿದ್ದ ವ್ಯಕ್ತಿಯು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಜಾಮೀನಿಲ್ಲದೆ ವರ್ಷಗಳಿಂದಲೂ ಜೈಲಿನಲ್ಲಿ ಕೊಳೆಯುತ್ತಿರುವ ಉಮರ್ ಖಾಲಿದ್ ಅಥವಾ ಶರ್ಜೀಲ್ ಇಮಾಂ ಅಲ್ಲ ಎಂದು ಮುಫ್ತಿ ಹೇಳಿದ್ದಾರೆ.
ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಕಲಾಪಗಳು ನಡೆಯುತ್ತಿರುವಾಗ ವಕೀಲ ರಾಕೇಶ ಕಿಶೋರ್(71) ತನ್ನ ಶೂ ಕಳಚಿ ಸಿಜೆಐ ಗವಾಯಿ ಅವರ ಮೇಲೆ ಎಸೆಯಲು ಪ್ರಯತ್ನಿಸಿದ್ದರು.







