ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನವನ್ನು‘ಅಪ್ಪಿಕೊಳ್ಳುತ್ತಿರುವ’ ಬಿಜೆಪಿ ಸರಕಾರದ ವಿರುದ್ಧ ಮೆಹಬೂಬ ಮುಫ್ತಿ ವಾಗ್ದಾಳಿ

Photo Credit: ANI
ಶ್ರೀನಗರ,ಅ.12: ಭಾರತದಲ್ಲಿಯ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನವನ್ನು ಅಪ್ಪಿಕೊಳ್ಳುತ್ತಿರುವುದು ಪಕ್ಷದ ಆಂತರಿಕ ಬೂಟಾಟಿಕೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ರವಿವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಅಫ್ಘಾನಿಸ್ತಾನದ ಜೊತೆಗೆ ತನ್ನ ರಾಜತಾಂತ್ರಿಕ ಸಂಬಂಧವನ್ನು ಬಲಗೊಳಿಸಲು ನಿರ್ಧರಿಸಿರುವಾಗ ಮತ್ತು ಅಫ್ಘಾನ್ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಮುಫ್ತಿಯವರ ಈ ಹೇಳಿಕೆ ಹೊರಬಿದ್ದಿದೆ.
ಲವ್ ಜಿಹಾದ್,ಲ್ಯಾಂಡ್ ಜಿಹಾದ್,ವೋಟ್ ಜಿಹಾದ್ ಮತ್ತು ಕೌ ಜಿಹಾದ್ ಹೆಸರಿನಲ್ಲಿ ತನ್ನದೇ ದೇಶದ ಮುಸ್ಲಿಮ್ ಸಮುದಾಯವನ್ನು ಪದೇ ಪದೇ ಗುರಿಯಾಗಿಸಿಕೊಂಡಿರುವ ಬಿಜೆಪಿ ಅವರನ್ನು ರಾಕ್ಷಸೀಕರಿಸುವ ನಿರೂಪಣೆಗಳನ್ನು ಪ್ರಚಾರ ಮಾಡುತ್ತಿದೆ. ಇದೇ ವೇಳೆ ‘ಪ್ರಜಾಪ್ರಭುತ್ವದ ತಾಯಿ’ ಭಾರತವು ಬಿಜೆಪಿಯಡಿ ಜಿಹಾದ್ನ ಪ್ರತಿಪಾದಕ ತಾಲಿಬಾನ್ ಅನ್ನು ಅಪ್ಪಿಕೊಳ್ಳಲು ನಿರ್ಧರಿಸಿದೆ ಎಂದು ಮುಫ್ತಿ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ಅಫ್ಘಾನ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ ಸೇರಿದಂತೆ ಆ ದೇಶದ ಪುನರ್ನಿರ್ಮಾಣಕ್ಕೆ ಎಲ್ಲ ರೀತಿಯ ನೆರವನ್ನು ನೀಡಲು ಭಾರತವು ಮುಂದಾಗಿದೆ. ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವುದು ವ್ಯೆಹಾತ್ಮಕ ವಾಗಿ ಮಹತ್ವದ್ದಾಗಿರಬಹುದು. ಆದರೆ ಅದು ಎದ್ದು ಕಾಣುವ ವಿರೋಧಾಭಾಸವನ್ನು ಹುಟ್ಟು ಹಾಕುತ್ತದೆ. ದೇಶದ ಸ್ವಾತಂತ್ರ್ಯ,ಅನನ್ಯತೆ ಮತ್ತು ಪ್ರಗತಿಗೆ ಕೊಡುಗೆಯನ್ನು ನೀಡಿರುವ ಭಾರತದ ಸ್ವಂತ ಮುಸ್ಲಿಮ್ ಸಮುದಾಯವನ್ನು
ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಮುಫ್ತಿ ಆರೋಪಿಸಿದ್ದಾರೆ.
ಬಿಜೆಪಿಯು ಮುಸ್ಲಿಮ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಹಿಂದೆಗೆದುಕೊಂಡಿರುವುದು ಮತ್ತು ಮದ್ರಸಗಳನ್ನು ಮಚ್ಚುತ್ತಿರುವುದು ಅದರ ಆಂತರಿಕ ಬೂಟಾಟಿಕೆಯನ್ನು ಸ್ಪಷ್ಟವಾಗಿ ನೆನಪಿಸುತ್ತಿದೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಮುಖ್ಯ,ಆದರೆ ಸ್ಥಿರ ಮತ್ತು ಸೌಹಾರ್ದಯುತ ದೇಶದ ಬುನಾದಿಯು ಅದರ ಸ್ವಂತ ನೆಲದಲ್ಲಿ, ನಿರ್ದಿಷ್ಟವಾಗಿ ಅದರ ಅಲ್ಪಸಂಖ್ಯಾತ ಸಮುದಾಯದೊಂದಿಗೆ ನಂಬಿಕೆ,ಗೌರವ ಮತ್ತು ಸಮಾನತೆಯನ್ನು ಬೆಳೆಸುವುದರಲ್ಲಿದೆ ಎಂದು ಮುಫ್ತಿ ತನ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ.







