ಅಕ್ರಮ ಹಣ ವರ್ಗಾವಣೆಯಲ್ಲಿ ಮೆಹುಲ್ ಚೋಕ್ಸಿ ಪುತ್ರ ಶಾಮೀಲು: ED ಆರೋಪ

ಮೆಹುಲ್ಚೋಕ್ಸಿ | Photo Credit : NDTV
ಹೊಸದಿಲ್ಲಿ,ಜ.16: ಬಹುಕೋಟಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ತಲೆಮರೆಸಿಕೊಂಡ ಆರೋಪಿ ಮೆಹುಲ್ಚೋಕ್ಸಿಯ ಪುತ್ರನಾದ ರೋಹ್ ಚೋಕ್ಸಿ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯವಾಗಿ ಶಾಮೀಲಾಗಿದ್ದಾನೆಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ದಿಲ್ಲಿಯಲ್ಲಿರುವ ಮೇಲ್ಮನವಿ ಟ್ರಿಬ್ಯೂನಲ್ಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಈ ವಿಷಯವನ್ನು ದೃಢಪಡಿಸಿದೆ.
ಮೆಹುಲ್ಚೋಕ್ಸಿ ಹಲವಾರು ಕಾಗದಪತ್ರಗಳಲ್ಲಿ ಮಾತ್ರವೇ ಇರುವ ಹಲವಾರು ಬೋಗಸ್ ಕಂಪೆನಿಗಳ ನಿರ್ದೇಶಕರಾಗಿದ್ದು, ಯಾವುದೇ ಸ್ಫುಟವಾದ ಉದ್ಯಮ ಚಟುವಟಿಕೆಯಿಲ್ಲದೆ ಕಾಲ್ಪನಿಕ ಹಣಕಾಸು ವರ್ಗಾವಣೆಗಳನ್ನು ಸೃಷ್ಟಿಸಿದ್ದರು ಮತ್ತು ಅಕ್ರಮ ಆದಾಯವನ್ನು ಸಕ್ರಮಗೊಳಿಸುತ್ತಿದ್ದರು. ಹಣಕಾಸು ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯಡಿ ಸಿಬಿಐ ಅಥವಾ ಜಾರಿ ನಿರ್ದೇಶನಾಲಯವು ಈವರೆಗೆ ಸಲ್ಲಿಸಿದ ಯಾವುದೇ ಎಫ್ಐಆರ್ ಅಥವಾ ದೋಷಾರೋಪಪಟ್ಟಿಯಲ್ಲಿ ರೋಹನ್ ಚೋಕ್ಸಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ.
ರೋಹನ್ ಚೋಕ್ಸಿ ಲ್ಯೂಸ್ಟರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಪಾಲುದಾರಿಕೆಯನ್ನು ಹೊಂದಿದ್ದು, ಮೆಹುಲ್ ಚೋಕ್ಸಿ ಇದರ ನಿರ್ದೇಶಕರಾಗಿದ್ದಾರೆ.
ವಿದೇಶಕ್ಕೆ ಹಣಕಾಸು ನಿಧಿಯನ್ನು ತಿರುಗಿಸಲು ಈ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಏಶ್ಯನ್ ಡೈಮಂಡ್ ಹಾಗೂ ಜ್ಯುವೆಲ್ಲರಿ ಎಫ್ಝಡ್ಇನಿಂದ ಸಿಂಗಾಪುರ ಮೂಲದ ಮೆರ್ಲಿನ್ ಲಕ್ಸು ಗ್ರೂಪ್ ಪ್ರೈವೇಟ್ ಲಿಮಿಟೆಡ್ಗೆ 1,27,500 ಅಮೆರಿಕನ್ ಡಾಲರ್ ಅಕ್ರಮ ಹಣ (ಸುಮಾರು 81.6 ಲಕ್ಷ ರೂ.)ವನ್ನು ವರ್ಗಾಯಿಸಲಾಗಿತ್ತೆಂದು ಏಜೆನ್ಸಿ ತಿಳಿಸಿದೆ.







