ಮೆಸ್ಸಿ ಹೈದರಾಬಾದ್ಗೆ ಬರುವುದು ದೃಢ: ತೆಲಂಗಾಣ ಸಿಎಂ ಘೋಷಣೆ

ಲಿಯೋನೆಲ್ ಮೆಸ್ಸಿ |Photo Credit : @WeAreMessi
ಹೈದರಾಬಾದ್: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಡಿ. 13ರಂದು ಹೈದರಾಬಾದ್ ಗೆ ಆಗಮಿಸಲಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕೃತವಾಗಿ ಘೋಷಿಸಿದ್ದಾರೆ.
ಮೆಸ್ಸಿಯ ಈ ಭೇಟಿ ಬಹುನಿರೀಕ್ಷಿತ “GOAT ಇಂಡಿಯಾ ಟೂರ್ 2025” ಯ ಭಾಗವಾಗಿದ್ದು, ಹೈದರಾಬಾದ್ ಜೊತೆಗೆ ಕೋಲ್ಕತ್ತಾ, ಮುಂಬೈ ಮತ್ತು ದಿಲ್ಲಿ ನಗರಗಳೂ ಪ್ರವಾಸದ ಪ್ರಮುಖ ಸ್ಥಳಗಳಾಗಾವೆ.
ಜುಬಿಲಿ ಹಿಲ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಮೆಸ್ಸಿ ತಂಡದಿಂದ ಸಹಿ ಮಾಡಲಾದ ಫುಟ್ಬಾಲ್ ಅನ್ನು ಸ್ವೀಕರಿಸಿದರು. “ತೆಲಂಗಾಣಕ್ಕೆ ಇದು ಹೆಮ್ಮೆಯ ಕ್ಷಣ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಿಗೆ ನಮ್ಮ ರಾಜ್ಯದಲ್ಲಿ ಆತಿಥ್ಯ ವಹಿಸಲು ಸಿಕ್ಕಿರುವುದು ಗೌರವದ ವಿಚಾರ,” ಎಂದು ಅವರು ಹೇಳಿದರು.
ಮೆಸ್ಸಿಯ ಹೈದರಾಬಾದ್ ಭೇಟಿ ಕೇವಲ ಕ್ರೀಡಾ ಕಾರ್ಯಕ್ರಮವಲ್ಲ, ನಗರದಾದ್ಯಂತದ ಕ್ರೀಡಾ ಉತ್ಸವವಾಗಲಿದೆ. ತೆಲಂಗಾಣ ಸರ್ಕಾರ ಹಾಗೂ ಸ್ಥಳೀಯ ಫುಟ್ಬಾಲ್ ಅಕಾಡೆಮಿಗಳು ಅಭಿಮಾನಿ ಸಮಾರಂಭಗಳು, ತರಬೇತಿ ಶಿಬಿರಗಳು ಮತ್ತು ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿವೆ.
ಮೂಲತಃ ಅರ್ಜೆಂಟೀನಾ ತಂಡದೊಂದಿಗೆ ಸ್ನೇಹಪರ ಪಂದ್ಯವನ್ನು ಕೊಚ್ಚಿಯಲ್ಲಿ ನಡೆಸುವ ಯೋಜನೆ ಇತ್ತು. ಆದರೆ ಆಯೋಜನೆಯಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗಿದ್ದರಿಂದ ಸ್ಥಳ ಬದಲಾವಣೆ ಮಾಡಲಾಗಿದ್ದು, ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯ ಹೊಂದಿರುವ ಹೈದರಾಬಾದ್ ಅಂತಿಮವಾಗಿ ಆಯ್ಕೆಗೊಂಡಿದೆ.
ಮೆಸ್ಸಿಯ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗುತ್ತಿದ್ದು, ಅಭೂತಪೂರ್ವ ಜನಸಂದಣಿಗೆ ನಗರದ ಆಡಳಿತ ಸಿದ್ಧತೆ ನಡೆಸುತ್ತಿದೆ.
ಮೆಸ್ಸಿಯ ಭಾರತ ಪ್ರವಾಸವು ಡಿ. 14 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಭವ್ಯ ಸಮಾರೋಪ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.
ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ, “GOAT ಇಂಡಿಯಾ ಟೂರ್ 2025” ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ ಎಂದೇ ವಿಶ್ಲೇಷಿಸಲಾಗಿದೆ. ವಿಶ್ವದ ಶ್ರೇಷ್ಠ ಫುಟ್ಬಾಲ್ ಪ್ರತಿಭೆಯನ್ನು ನೇರವಾಗಿ ನೋಡುವ ಈ ಅವಕಾಶವು ಭಾರತದ ಬೆಳೆಯುತ್ತಿರುವ ಫುಟ್ಬಾಲ್ ಸಂಸ್ಕೃತಿಗೆ ಹೊಸ ಶಕ್ತಿ ತುಂಬಲಿದೆ.







