MGNREGA ಉಳಿಸಲು ರಾಷ್ಟ್ರವ್ಯಾಪಿ ಆಂದೋಲನ; ಕಾಂಗ್ರೆಸ್ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಣಯ

Photo Credit : PTI
ಹೊಸದಿಲ್ಲಿ, ಡಿ. 27: ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR), MGNREGA ಬದಲಿಗೆ ಬಂದಿರುವ ನೂತನ ಜಿ ರಾಮ್ ಜಿ ಕಾಯ್ದೆ ಹಾಗೂ ಬಾಂಗ್ಲಾದೇಶದಲ್ಲಿ ಪ್ರಸಕ್ತ ನೆಲೆಸಿರುವ ಅಶಾಂತಿ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಕಾಂಗ್ರೆಸ್ ಕ್ರಿಯಾ ಸಮಿತಿ (CWC) ಸಭೆಯಲ್ಲಿ ಶನಿವಾರ ಚರ್ಚಿಸಲಾಯಿತು.
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ನಿರ್ಧಾರ ತೆಗೆದುಕೊಳ್ಳುವ ಪಕ್ಷದ ಅತ್ಯುನ್ನತ ಗುಂಪಿನ ಸಭೆಯಲ್ಲಿ ಭಾಗವಹಿಸಿದರು.
ಸಭೆಯ ಬಳಿಕ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ಖರ್ಗೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕೈಬಿಟ್ಟಿರುವುದಕ್ಕೆ ಜನರು ಕೋಪಗೊಂಡಿದ್ದಾರೆ ಎಂದು ಹೇಳಿದರು ಹಾಗೂ ಇದರ ಪರಿಣಾಮಗಳನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಶನ್ (ಗ್ರಾಮೀಣ) ಕಾಯ್ದೆಯು ಯಾರೊಂದಿಗೂ ಸಮಾಲೋಚಿಸದ ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಖರ್ಗೆ ಆರೋಪಿಸಿದರು. ಈ ಕಾಯಿದೆಯು ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರಿಸುತ್ತದೆ ಎಂದು ಹೇಳಿದರು. ಮನ್ರೇಗ ಯೋಜನೆಯನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದು ಎಂದು ಹೇಳಿದರು.
‘‘2026 ಜನವರಿ 5ರಿಂದ ‘ಮನ್ರೇಗ ಬಚಾವೊ ಆಂದೋಲನ’ವನ್ನು ಆರಂಭಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ’’ ಎಂದರು.
‘‘ಮನ್ರೇಗದಿಂದ ಮಹಾತ್ಮಾ ಗಾಂಧಿಯ ಹೆಸರನ್ನು ತೆಗೆದು ಹಾಕುವ ಪ್ರತಿ ಪಿತೂರಿಯನ್ನು ನಾವು ಪ್ರಜಾಸತ್ತಾತ್ಮಕವಾಗಿ ವಿರೋಧಿಸುವ ಪ್ರತಿಜ್ಞೆಯನ್ನು ನಾವು ತೆಗೆದುಕೊಂಡಿದ್ದೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಮನ್ರೇಗವನ್ನು ರಕ್ಷಿಸುವ, ಕಾರ್ಮಿಕರ ಹಕ್ಕುಗಳನ್ನು ಉಳಿಸುವ ಮತ್ತು ಪ್ರತಿ ಗ್ರಾಮದಲ್ಲಿ ನಮ್ಮ ಧ್ವನಿಗಳನ್ನು ಎತ್ತುವ ಪ್ರತಿಜ್ಞೆಯನ್ನು ನಾವು ತೆಗೆದುಕೊಂಡಿದ್ದೇವೆ. ‘ಜೈ ಸಂವಿಧಾನ’ ಮತ್ತು ‘ಜೈ ಹಿಂದ್’ ಘೋಷಣೆಗಳೊಂದಿಗೆ ನಾವು ಈ ನಿರ್ಧಾರವನ್ನು ಸಾಮೂಹಿಕವಾಗಿ ತೆಗೆದುಕೊಂಡಿದ್ದೇವೆ’’ ಎಂದರು.
► ಎಸ್ಐಆರ್ಗೆ ವಿರೋಧ
ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಪಕ್ಷದ ವಿರೋಧವನ್ನು ಕಾಂಗ್ರೆಸ್ ಕ್ರಿಯಾ ಸಮಿತಿ ಸಭೆಯಲ್ಲಿ ಖರ್ಗೆ ಪುನರುಚ್ಚರಿಸಿದರು. ಇದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರ್ಬಂಧಿಸಲು ನಡೆಸಲಾಗುತ್ತಿರುವ ಪಿತೂರಿಯಾಗಿದೆ ಎಂದು ಅವರು ಬಣ್ಣಿಸಿದರು.
► ಸಭೆಗೆ ಮುನ್ನ ಆರೆಸ್ಸೆಸ್, ಬಿಜೆಪಿ ಓಲೈಸಿ ದಿಗ್ವಿಜಯ್ ಸಂದೇಶ!
ಕಾಂಗ್ರೆಸ್ ಕ್ರಿಯಾ ಸಮಿತಿ ಸಭೆ ಆರಂಭಗೊಳ್ಳುವ ಸ್ವಲ್ಪವೇ ಹೊತ್ತಿನ ಮುನ್ನ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್, ಬಿಜೆಪಿ ಮತ್ತು RSS ಅನ್ನು ಓಲೈಸುವ ಸಾಮಾಜಿಕ ಮಾಧ್ಯಮ ಸಂದೇಶವೊಂದನ್ನು ಹಾಕುವ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದರು.
‘‘ಈ ಚಿತ್ರವನ್ನು ನಾನು ‘ಕೋರ’ ವೆಬ್ಸೈಟ್ ನಲ್ಲಿ ನೋಡಿದೆ. ಮನಮುಟ್ಟುವಂತಿದೆ. ಆರ್ಎಸ್ಎಸ್ನ ತಳಮಟ್ಟದ ಸ್ವಯಂಸೇವಕರು ಮತ್ತು ಜನಸಂಘ/ಬಿಜೆಪಿಯ ಕಾರ್ಯಕರ್ತರು ನಾಯಕರ ಕಾಲಬುಡದಲ್ಲಿ ನೆಲದಲ್ಲಿ ಕುಳಿತುಕೊಂಡು ಮುಂದೆ ರಾಜ್ಯವೊಂದರ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗುವುದು ಸಂಘಟನೆಯ ಶಕ್ತಿಯನ್ನು ತೋರಿಸುತ್ತದೆ. ಜೈ ಸಿಯಾ ರಾಮ್’’ ಎಂಬ ಸಂದೇಶವನ್ನು ಸಿಂಗ್ ‘ಎಕ್ಸ್’ನಲ್ಲಿ ಹಾಕಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಎಲ್.ಕೆ .ಅಡ್ವಾಣಿ ಗುಜರಾತ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮತ್ತು ಅವರ ಪಕ್ಕದಲ್ಲಿ ಯುವ ನರೇಂದ್ರ ಮೋದಿ ನೆಲದಲ್ಲಿ ಕುಳಿತಿರುವ ಚಿತ್ರವೊಂದನ್ನು ಅವರು ಈ ಸಂದೇಶಕ್ಕೆ ಲಗತ್ತಿಸಿದ್ದಾರೆ.
ಇದು ವಿವಾದವಾಗುತ್ತಿರುವಂತೆಯೇ, ‘‘ನನ್ನನ್ನು ಮಾಧ್ಯಮಗಳು ತಪ್ಪು ಅರ್ಥ ಮಾಡಿಕೊಂಡಿವೆ’’ ಎಂದು ದಿಗ್ವಿಜಯ ಸಿಂಗ್ ಹೇಳಿದರು. ‘‘ನಾನು ಸಂಘಟನೆಯನ್ನು ಹೊಗಳಿದ್ದೇನೆ. ನಾನು ಆರ್ಎಸ್ಎಸ್ ಮತ್ತು ಮೋದೀಜಿಯ ಕಟ್ಟಾ ವಿರೋಧಿ’’ ಎಂದು ಹೇಳಿದರು.
ಪಕ್ಷದಲ್ಲಿ ಸುಧಾರಣೆಯಾಗಬೇಕು ಮತ್ತು ವಿಕೇಂದ್ರೀಕರಣವಾಗಬೇಕು ಎಂಬುದಾಗಿ ಅವರು ಕರೆ ನೀಡಿದ ಒಂದು ವಾರದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ವಿಷಯವನ್ನು ಅವರು ಶನಿವಾರ ನಡೆದ ಕಾಂಗ್ರೆಸ್ ಕ್ರಿಯಾ ಸಮಿತಿ ಸಭೆಯಲ್ಲೂ ಪ್ರಸ್ತಾಪಿಸಿದರು.







