2022-24ರ ನಡುವೆ 1.55 ಕೋಟಿಗೂ ಅಧಿಕ ಎಂಜಿಎನ್ಆರ್ ಇ ಜಿ ಎಸ್ ಕಾರ್ಮಿಕರ ಹೆಸರು ತೆಗೆಯಲಾಗಿದೆ: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ಆರ್ಇಜಿಎಸ್)ಯಿಂದ 2022 ಹಾಗೂ 2024ರ ನಡುವೆ 1.55 ಕೋಟಿಗೂ ಅಧಿಕ ಸಕ್ರಿಯ ಕಾರ್ಮಿಕರ ಹೆಸರುಗಳನ್ನು ತೆಗೆಯಲಾಗಿದೆ ಎಂದು ಸರಕಾರ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯ ಸಹಾಯಕ ಸಚಿವ ಕಮಲೇಶ್ ಪಾಸ್ವಾನ್, ಹಣಕಾಸು ವರ್ಷ 2022-23 ಹಾಗೂ 2023-24ರ ಸಂದರ್ಭ ಅನುಕ್ರಮವಾಗಿ 86,17,887 ಹಾಗೂ 68,86,532 ಹೆಸರುಗಳನ್ನು ಅಳಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಎರಡು ಹಣಕಾಸು ವರ್ಷಗಳಲ್ಲಿ ಹೆಸರು ಅಳಿಸಲಾದ ಒಟ್ಟು ಕಾರ್ಮಿಕರ ಸಂಖ್ಯೆ 1,55,04,419 ಎಂದು ಅವರು ತಿಳಿಸಿದರು.
ನಕಲಿ ಅಥವಾ ತಪ್ಪಾದ ಉದ್ಯೋಗ ಕಾರ್ಡ್, ಕುಟುಂಬ ಶಾಶ್ವತವಾಗಿ ಗ್ರಾಮ ಪಂಚಾಯತ್ನಿಂದ ಹೊರಗೆ ಸ್ಥಳಾಂತರಗೊಂಡಿರುವುದು ಅಥವಾ ಅವರ ಗ್ರಾಮಗಳು ನಗರ ಎಂದು ವರ್ಗೀಕೃತಗೊಂಡಿರುವುದು-ಮುಂತಾದ ಕಾರಣಗಳಿಗಾಗಿ ಈ ಕಾರ್ಮಿಕರ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಕಮಲೇಶ್ ಪಾಸ್ವಾನ್ ತಿಳಿಸಿದ್ದಾರೆ.