19 ಮಾಜಿ ಕೇಂದ್ರ ಸಚಿವರ ಭದ್ರತೆ ಕೈಬಿಟ್ಟು, ಸ್ಮೃತಿ ಇರಾನಿಗೆ ಮಾತ್ರ ಭದ್ರತೆ ನೀಡಿದ ಗೃಹ ಸಚಿವಾಲಯ
ಲೆಕ್ಕ ಪರಿಶೋಧನೆಯ ಬಳಿಕ ಈ ನಿರ್ಧಾರ

ಸ್ಮೃತಿ ಇರಾನಿ (Photo: PTI)
ಹೊಸದಿಲ್ಲಿ: ಅಧಿಕಾರಾವಧಿ ಮುಗಿದಿದ್ದರೂ ಭದ್ರತೆ ಪಡೆಯುತ್ತಿರುವ 19 ಮಾಜಿ ರಾಜ್ಯ ಸಚಿವರಿಗೆ ನೀಡಿರುವ ಭದ್ರತೆಯನ್ನು ವಾಪಸ್ ಪಡೆಯುವಂತೆ ದಿಲ್ಲಿ ಪೊಲೀಸರಿಗೆ ಗೃಹ ಸಚಿವಾಲಯ ನಿರ್ದೇಶನ ನೀಡಿದೆ ಎಂದು The Indian Express ವರದಿ ಮಾಡಿದೆ.
ಅದರೆ, ಬಿಜೆಪಿ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭದ್ರತೆಯನ್ನು ಆರು ತಿಂಗಳವರೆಗೆ ವಿಸ್ತರಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
The Indian Express ಜ.2 ರಂದು, ಅಧಿಕಾರಲ್ಲಿಲ್ಲದಿದ್ದರೂ ದಿಲ್ಲಿ ಪೊಲೀಸರಿಂದ ಭದ್ರತಾ ಸವಲತ್ತು ಪಡೆಯುತ್ತಿರುವ ಮಾಜಿ ಸಚಿವರ ಕುರಿತು ವರದಿ ಮಾಡಲು ಗೃಹ ಸಚಿವಾಲಯವನ್ನು ಸಂಪರ್ಕಿಸಿತ್ತು. ಆ ಬಳಿಕ ದಿಲ್ಲಿ ಪೊಲೀಸರ ಭದ್ರತಾ ಘಟಕ ನಡೆಸಿದ ಆಡಿಟಿಂಗ್ ನಲ್ಲಿ ಈ ಆದೇಶ ಹೊರಬಿದ್ದಿದೆ.
"ಹಲವಾರು ಹಿರಿಯ ರಾಜಕಾರಣಿಗಳು ತಮ್ಮ ಅಧಿಕಾರಾವಧಿ ಮುಗಿದ ನಂತರವೂ ಭದ್ರತಾ ರಕ್ಷಣೆಯನ್ನು ಪಡೆಯುತ್ತಿದ್ದಾರೆ ಎಂದು ಲೆಕ್ಕಪರಿಶೋಧನೆಯು ಬಹಿರಂಗಪಡಿಸಿದೆ. ದೀರ್ಘಕಾಲದವರೆಗೆ ಭದ್ರತಾ ಪರಿಶೀಲನೆಯನ್ನು ನಡೆಸಲಾಗಿಲ್ಲ", ಎಂದು ಅಧಿಕಾರಿಯೊಬ್ಬರು ಹೇಳಿದರು.
ಲೆಕ್ಕಪರಿಶೋಧನೆಯ ನಂತರ, ಹಲವಾರು ವ್ಯಕ್ತಿಗಳಿಗೆ ಭದ್ರತಾ ರಕ್ಷಣೆಯನ್ನು ಹಿಂಪಡೆಯಲಾಯಿತು. ಈ ಕುರಿತು ಪರಿಶೀಲಿಸಿದಾಗ ಅನೇಕ ಮಾಜಿ ಸಚಿವರಿಗೆ ಅಧಿಕಾರವಿಲ್ಲದಿದ್ದರೂ ರಕ್ಷಣೆ ಸಿಗುತ್ತಿರುವುದು ಕಂಡು ಬಂತು ಎನ್ನಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಮಾಜಿ ಸಹಾಯಕ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ, ಪಂಚಾಯತ್ ರಾಜ್ ಮಾಜಿ ಸಚಿವ ಬೀರೇಂದರ್ ಸಿಂಗ್, ಸಂವಹನ ಸಚಿವಾಲಯದ ಮಾಜಿ ಸಹಾಯಕ ಸಚಿವ ದೇವುಸಿನ್ಹ್ ಜೇಸಿಂಗ್ಭಾಯ್ ಚೌಹಾಣ್, ಬುಡಕಟ್ಟು ವ್ಯವಹಾರಗಳ ಮಾಜಿ ಸಹಾಯಕ ಸಚಿವ ಜಸ್ವಂತ್ಸಿನ್ಹ್ ಸುಮನ್ಭಾಯ್ ಭಾಭೋರ್ ಮತ್ತು ವಿದೇಶಾಂಗ ವ್ಯವಹಾರಗಳ ಮಾಜಿ ಸಹಾಯಕ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಸೇರಿದಂತೆ ಹಲವರಿಗೆ ವೈ ಕೆಟಗರಿ ಭದ್ರತೆ ನೀಡಲಾಗುತ್ತಿತ್ತು. ಅಂತಹ ವ್ಯಕ್ತಿಗಳ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸಹಾಯಕ ಸಚಿವರ ಜೊತೆಗೆ, ಗೃಹ ಸಚಿವಾಲಯದ ಪಟ್ಟಿಯಲ್ಲಿ ಕೆಲವು ಸಂಸತ್ ಸದಸ್ಯರು ಮತ್ತು ಹಿರಿಯ ನ್ಯಾಯಾಧೀಶರ ಹೆಸರುಗಳೂ ಸೇರಿವೆ. ಕೆಲವು ನ್ಯಾಯಾಧೀಶರಿಗೆ ಒದಗಿಸುತ್ತಿರುವ ಭದ್ರತೆಯನ್ನು ಉಳಿಸಿಕೊಳ್ಳಲಾಗಿದೆ", ಎಂದು ಅಧಿಕಾರಿಗಳು ತಿಳಿಸಿದ್ದಾರೆ.







