ಮಿಗ್-21 ಯುದ್ಧ ವಿಮಾನಗಳ ಯುಗ ಅಂತ್ಯ; ಸೇವೆಯಿಂದ ಹಿಂಪಡೆಯಲು ಐಎಎಫ್ ನಿರ್ಧಾರ

PC : PTI
ಹೊಸದಿಲ್ಲಿ: ಭಾರತೀಯ ವಾಯು ಪಡೆ (ಐಎಎಫ್) ಶೀಘ್ರದಲ್ಲಿ ಜನಪ್ರಿಯ ಮಿಗ್-21 ಯುದ್ಧ ವಿಮಾನಗಳ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸಲಿದೆ. ಅವುಗಳ ಸ್ಥಾನದಲ್ಲಿ ತೇಜಸ್ ಎಂಕೆ1ಎ ಯುದ್ಧ ವಿಮಾನಗಳನ್ನು ತರಲಿದೆ ಎಂದು ವರದಿಯಾಗಿದೆ.
ಐಎಎಫ್ ಸೆಪ್ಟಂಬರ್ ವೇಳೆಗೆ ಮಿಗ್-21 ಯುದ್ಧ ವಿಮಾನಗಳನ್ನು ಸಕ್ರಿಯ ಸೇವೆಯಿಂದ ಹೊರಗಿಡಲಿದೆ ಎಂದು ಎನ್ಡಿಟಿವಿ ವರದಿ ಹೇಳಿದೆ.
ಭಾರತೀಯ ವಾಯು ಪಡೆ ಪ್ರಸ್ತುತ 36 ಮಿಗ್-21 ಯುದ್ಧ ವಿಮಾನಗಳನ್ನು ಹೊಂದಿದ್ದು, ಅವುಗಳ ಪೈಕಿ ಬೈಸನ್ ಮಾದರಿಯ ಯುದ್ಧ ವಿಮಾನಗಳನ್ನು ಈಗ ಸೇವೆಯಿಂದ ಹೊರಗಿಡಲಾಗುವುದು. ಮಿಗ್-21 ಯುದ್ಧ ವಿಮಾನಗಳ ಬಳಕೆಯನ್ನು ನಿಲ್ಲಿಸುವುದಾಗಿ 2023ರಲ್ಲೇ ಘೋಷಣೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.
‘‘ನಾವು ಮಿಗ್-21 ಯುದ್ಧ ವಿಮಾನದ ಹಾರಾಟವನ್ನು 2025ರ ಒಳಗೆ ನಿಲ್ಲಿಸಲಿದ್ದೇವೆ. ಅದರ ಸ್ಥಾನಕ್ಕೆ ಎಲ್ಸಿಎ ಮಾರ್ಕ್-1ಎಯನ್ನು ತರಲಿದ್ದೇವೆ’’ ಎಂದು ಅಂದಿನ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧುರಿ 2023ರಲ್ಲಿ ಹೇಳಿದ್ದರು. ಮಿಗ್-29 ಯುದ್ಧ ವಿಮಾನಗಳ ಹಾರಾಟವನ್ನು ಕೂಡ 2027ರ ವೇಳೆಗೆ ನಿಲ್ಲಿಸಲು ಭಾರತೀಯ ವಾಯು ಪಡೆ ಚಿಂತಿಸುತ್ತಿದೆ ಎಂದು ವರದಿ ಹೇಳಿದೆ.
ಮಿಗ್-21 ಯುದ್ಧ ವಿಮಾನಗಳು ಹಲವು ದಶಕಗಳ ಕಾಲ ದೇಶವನ್ನು ರಕ್ಷಿಸಿದೆ. ಆದರೂ ಈ ಜನಪ್ರಿಯ ಯುದ್ಧ ವಿಮಾನಗಳು ಹಲವು ಬಾರಿ ಅಪಘಾತಕ್ಕೆ ಈಡಾಗಿವೆ. ಇದು ಅವುಗಳ ಬಳಕೆಯನ್ನು ಹಂತ ಹತಂವಾಗಿ ರದ್ದುಗೊಳಿಸುವ ನಿರ್ಧಾರಕ್ಕೆ ಬರಲು ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.







