ಜಮ್ಮು ಮತ್ತು ಕಾಶ್ಮೀರ | ಸೇನಾ ಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ: ಓರ್ವ ಉಗ್ರನ ಹತ್ಯೆ

ಸಾಂದರ್ಭಿಕ ಚಿತ್ರ (PTI)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸೇನಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದು, ಮೂವರು ಸೇನಾಧಿಕಾರಿಗಳು ಗಾಯಗೊಂಡಿದ್ದಾರೆ.
ಪೊಲೀಸರ ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನಾಧರಿಸಿ, ಸೇನಾಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಇಂದು ದಕ್ಷಿಣ ಕಾಶ್ಮೀರದ ಗುದ್ದಾರ್ ಅರಣ್ಯದಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿದರು.
ಈ ಶೋಧ ಕಾರ್ಯಾಚರಣೆಯ ವೇಳೆ ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಿದ ಸೇನಾ ಪಡೆಗಳು, ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದ ಉಗ್ರರನ್ನು ಗುರಿಯಾಗಿಸಿಕೊಂಡು ಪ್ರತಿ ಗುಂಡಿನ ದಾಳಿ ನಡೆಸಿದವು.
ಈ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾದರೆ, ಕಿರಿಯ ಸೇನಾಧಿಕಾರಿ ಸೇರಿದಂತೆ ಒಟ್ಟು ಮೂವರು ಸೇನಾಧಿಕಾರಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಸೇನಾಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಈ ಶೋಧ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈಯ್ಯಲಾಗಿದ್ದು, ಓರ್ವ ಕಿರಿಯ ಸೇನಾಧಿಕಾರಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ” ಎಂದು ಚಿನಾರ್ ಕಾರ್ಪ್ಸ್ ಹೇಳಿದೆ.
ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಹೆಚ್ಚುವರಿ ಸೇನಾಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.







