ಪೂರ್ವ ಲಡಾಖ್ ನ ಎಲ್ಎಸಿಯಲ್ಲಿ ಉದ್ವಿಗ್ನತೆ ಕುರಿತು ಭಾರತ-ಚೀನಾ ನಡುವೆ ಮಿಲಿಟರಿ ಮಾತುಕತೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಈ ವಾರದ ಆರಂಭದಲ್ಲಿ ನಡೆದ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳ ಸಂದರ್ಭದಲ್ಲಿ ಪೂರ್ವ ಲಡಾಖ್ ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯುದ್ದಕ್ಕೂ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.
ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 21ನೇ ಸುತ್ತಿನ ಮಾತುಕತೆಗಳು ಫೆ.19ರಂದು ಚುಷುಲ್-ಮೊಲ್ಡೋ ಗಡಿ ಸಭೆ ಕೇಂದ್ರದಲ್ಲಿ ನಡೆದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಆದರೆ,ಹಲವಾರು ಘರ್ಷಣೆ ಕೇಂದ್ರಗಳಲ್ಲಿ ಕಳೆದ ಮೂರೂವರೆ ವರ್ಷಗಳಿಂದಲೂ ಹೊಗೆಯಾಡುತ್ತಿರುವ ವಿವಾದವನ್ನು ಬಗೆಹರಿಸುವಲ್ಲಿ ಸೋಮವಾರದ ಮಾತುಕತೆಗಳಲ್ಲಿ ಯಾವುದೇ ಸ್ಪಷ್ಟವಾದ ಪ್ರಗತಿಯಾಗಿಲ್ಲ ಎಂದು ವಿಷಯವನ್ನು ಬಲ್ಲ ಮೂಲಗಳು ತಿಳಿಸಿವೆ.
ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆಗೆ ಅಗತ್ಯ ಆಧಾರವಾಗಿ ಪೂರ್ವ ಲಡಾಖ್ ನ ಎಲ್ಎಸಿಯುದ್ದಕ್ಕೂ ಉಳಿದ ಪ್ರದೇಶಗಳಿಂದ ಸಂಪೂರ್ಣ ನಿಸ್ಸೇನಿಕರಣವನ್ನು ಕೋರಿದ್ದ ಮಾತುಕತೆಗಳ ಆಧಾರದಲ್ಲಿ ಚರ್ಚೆಗಳು ನಡೆದಿದ್ದವು ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು, ಸ್ನೇಹಮಯಿ ಮತ್ತು ಸೌಹಾರ್ದಪೂರ್ಣ ವಾತಾವರಣದಲ್ಲಿ ನಡೆದ ಮಾತುಕತೆಗಳ ಸಂದರ್ಭ ಉಭಯ ದೇಶಗಳು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡವು. ಸಂಬಂಧಿತ ಮಿಲಿಟರಿ ಮತ್ತು ರಾಜತಾಂತ್ರಿಕ ಕಾರ್ಯವಿಧಾನಗಳ ಮೂಲಕ ಸಂವಹನವನ್ನು ಕಾಯ್ದುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ. ಮಧ್ಯಂತರದಲ್ಲಿ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಬದ್ಧತೆಯನ್ನೂ ಅವು ವ್ಯಕ್ತಪಡಿಸಿವೆ ಎಂದು ಹೇಳಿದೆ.







