ಎಲಾನ್ ಮಸ್ಕ್ ನೇತೃತ್ವದ ʼಸ್ಟಾರ್ಲಿಂಕ್ʼ ಅನ್ನು ಭಾರತಕ್ಕೆ ಸ್ವಾಗತಿಸಿ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್!

ಅಶ್ವಿನಿ ವೈಷ್ಣವ್ (Photo: PTI)
ಹೊಸದಿಲ್ಲಿ: ಎಲಾನ್ ಮಸ್ಕ್ ನೇತೃತ್ವದ ‘ಸ್ಟಾರ್ಲಿಂಕ್’ ನ್ನು ಸ್ವಾಗತಿಸಿ ಮಾಡಿರುವ ಪೋಸ್ಟ್ ಅನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಅಳಿಸಿ ಹಾಕಿದ್ದಾರೆ.
ವೈಷ್ಣವ್ ಅವರು ಸ್ಟಾರ್ಲಿಂಕ್ ಗೆ ಭಾರತಕ್ಕೆ ಸ್ವಾಗತ! ರೈಲ್ವೆ ಯೋಜನೆಗಳಿಗೆ ಇದು ಉಪಯುಕ್ತವಾಗಿದೆ ಎಂದು ಪೋಸ್ಟ್ ಮಾಡಿದ್ದರು.
ಟೆಲಿಕಾಂ ಪ್ರತಿಸ್ಪರ್ಧಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಎಲಾನ್ ಮಸ್ಕ್ ಅವರ ಮಾಲಕತ್ವದ ಸ್ಪೇಸ್ಎಕ್ಸ್ನೊಂದಿಗೆ ʼಸ್ಟಾರ್ಲಿಂಕ್ ʼ ಇಂಟರ್ನೆಟ್ ಸೇವೆಗಳನ್ನು ಭಾರತಕ್ಕೆ ತರಲು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಆದರೆ, ಸ್ಟಾರ್ಲಿಂಕ್ ದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಭಾರತ ಸರಕಾರದಿಂದ ಅನುಮೋದನೆ ಪಡೆಯಬೇಕಿದೆ.
ಈ ಕುರಿತು ಎಕ್ಸ್ನಲ್ಲಿ ಮಾಡಿರುವ ಸಚಿವ ಅಶ್ವಿನಿ ವೈಷ್ಣವ್ ಅವರ ಪೋಸ್ಟ್, ಸರಕಾರ ಸ್ಟಾರ್ಲಿಂಕ್ಗೆ ಭಾರತದಲ್ಲಿ ಕಾರ್ಯಚರಣೆಗೆ ಅನುಮತಿ ನೀಡಿದೆಯೇ ಎಂಬುದರ ಕುರಿತು ಊಹೆಗೆ ಕಾರಣವಾಯಿತು. ಆದರೆ, ಪೋಸ್ಟ್ ಅನ್ನು ಅಳಿಸಿರುವುದರಿಂದ ಅನುಮತಿ ನೀಡಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಈ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಎಲಾನ್ ಮಸ್ಕ್ ಅವರಿಂದ ಎಷ್ಟು ಪಡೆಯುತ್ತಿದೆ? ನಮ್ಮ ದೇಶವನ್ನು ಅಮೆರಿಕದ ಸಂಸ್ಥೆಗೆ ವಿನಮ್ರವಾಗಿ ಮಾರಾಟ ಮಾಡಿದ್ದಕ್ಕೆ ಮೋದಿಗೆ ಪ್ರತಿಯಾಗಿ ಏನು ಸಿಗುತ್ತಿದೆ? ಚುನಾವಣೆಗೆ ಸಹಾಯ? ಎಂದು ಪ್ರಶ್ನಿಸಿದರು.
ಎರಡು ದೊಡ್ಡ ಟೆಲಿಕಾಂ ಪೂರೈಕೆದಾರರು ಸ್ಟಾರ್ಲಿಂಕ್ ಜೊತೆ ಕೈಜೋಡಿಸುವುದರೊಂದಿಗೆ ಏಕಸ್ವಾಮ್ಯದ ಬಗ್ಗೆ ಕಳವಳಗಳಿವೆ. ಈ ಒಪ್ಪಂದಗಳ ಬಗ್ಗೆ ಸಂಸತ್ತಿನಲ್ಲಿ ಅಥವಾ ಸಾರ್ವಜನಿಕವಾಗಿ ಚರ್ಚೆ ನಡೆಯದಿರುವ ಬಗ್ಗೆ ಪ್ರಶ್ನೆಗಳು ಉದ್ಭವಿಸಿದೆ.