ಚಿಲಿ, ಕೆನಡ, ಅಮೆರಿಕ ಜೊತೆ ವ್ಯಾಪಾರ ಮಾತುಕತೆ ಚಾಲ್ತಿಯಲ್ಲಿದೆ: ಸಚಿವ ಪಿಯೂಷ್ ಗೋಯಲ್

ಪಿಯೂಷ್ ಗೋಯಲ್ | Photo Credit : PTI
ಹೊಸದಿಲ್ಲಿ, ಜ. 30: ಭಾರತವು ಚಿಲಿ, ಕೆನಡ ಮತ್ತು ಅಮೆರಿಕ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ. ಚಿಲಿ ಜೊತೆಗಿನ ಮಾತುಕತೆ ಮುಂದುವರಿದ ಹಂತದಲ್ಲಿದ್ದರೆ, ಉಳಿದ ಎರಡು ದೇಶಗಳ ಜೊತೆಗಿನ ಮಾತುಕತೆ ವಿವಿಧ ಹಂತಗಳಲ್ಲಿದೆ ಎಂದು ಅವರು ತಿಳಿಸಿದರು.
ಭಾರತದೊಂದಿಗಿನ ಪ್ರತಿಯೊಂದು ಮುಕ್ತ ವ್ಯಾಪಾರ ಒಪ್ಪಂದವು ಅರ್ಹತೆಯನ್ನಾಧರಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದರು. ‘‘ಅನುಕೂಲಗಳು ಮತ್ತು ಅನನುಕೂಲಗಳನ್ನು ವಿಶ್ಲೇಷಿಸಿದ ಬಳಿಕವಷ್ಟೇ ಭಾರತವು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’’ ಎಂದರು.
‘‘ಚಿಲಿಯೊಂದಿಗೆ ನಾವು ಮುಂದುವರಿದ ಹಂತಗಳ ಮಾತುಕತೆಗಳಲ್ಲಿ ತೊಡಗಿದ್ದೇವೆ. ಕೆನಡ ಮತ್ತು ಅಮೆರಿಕ ಜೊತೆಗೂ ನಾವು ಮಾತುಕತೆಗಳನ್ನು ನಡೆಸುತ್ತಿದ್ದೇವೆ. ಕೊಲ್ಲಿ ಸಹಕಾರ ಮಂಡಳಿ(ಜಿಸಿಸಿ)ಯ ಆರು ದೇಶಗಳೊಂದಿಗೆ ಶೀಘ್ರದಲ್ಲೇ ಮಾತುಕತೆಗಳು ಆರಂಭಗೊಳ್ಳುವುದು ಎಂಬ ಮಾಹಿತಿಯನ್ನೂ ಪಿಯೂಷ್ ಗೋಯಲ್ ನೀಡಿದರು.





