"ವಾಸ್ತವಗಳನ್ನು ತಿರುಚುವುದನ್ನು ನಿಲ್ಲಿಸಿ" : ಪಿಎಂ-ಶ್ರೀ ಶಾಲೆಗಳಿಗೆ ತಮಿಳುನಾಡು ಸರಕಾರ ʼಒಪ್ಪಿಗೆ ಪತ್ರʼ ನೀಡಿದೆ ಎಂದ ಸಚಿವ ಪ್ರಧಾನ್ ಹೇಳಿಕೆಗೆ ಡಿಎಂಕೆ ತಿರುಗೇಟು

ಹೊಸದಿಲ್ಲಿ: ಪಿಎಂ-ಶ್ರೀ ಶಾಲೆಗಳ ಸ್ಥಾಪನೆಗೆ ತಮಿಳುನಾಡು ಸರಕಾರ ಸಹಮತ ಪತ್ರ ನೀಡಿತ್ತು ಎಂಬ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿದ ಡಿಎಂಕೆ ಸಂಸದೆ ಕನಿಮೋಳಿ, “ವಾಸ್ತವಗಳನ್ನು ತಿರುಚುವುದನ್ನು ಬಿಡಿ” ಎಂದು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರದ ನಡುವೆ ತ್ರಿಭಾಷಾ ಸೂತ್ರದ ಕುರಿತು ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕನಿಮೋಳಿ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಎಕ್ಸ್ ನಲ್ಲಿ ಧರ್ಮೇಂದ್ರ ಪ್ರಧಾನ್ ಮಾಡಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಡಿಎಂಕೆ ಸಂಸದೆ ಕನಿಮೋಳಿ, ಶಿಕ್ಷಣ ಸಚಿವರು ಒದಗಿಸುವ ಪತ್ರದಲ್ಲಿ ತಮಿಳುನಾಡು ತ್ರಿಭಾಷಾ ಸೂತ್ರ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.
“ರಾಜ್ಯ ಸರಕಾರ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ತಮಿಳುನಾಡು ಪಿಎಂ-ಶ್ರೀ ಶಾಲೆಗಳನ್ನು ಒಪ್ಪಿಕೊಂಡಿದೆ ಎಂದು ಆ ಪತ್ರದಲ್ಲಿ ಹೇಳಲಾಗಿದೆಯೆ ಹೊರತು ಕೇಂದ್ರ ಸರಕಾರದ ಶಿಫಾರಸನ್ನು ಆಧರಿಸಿ ಎಂದಲ್ಲ. ನಾವೆಲ್ಲೂ ತ್ರಿಭಾಷಾ ಸೂತ್ರ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಒಪ್ಪಿಕೊಂಡಿದ್ದೇವೆ ಎಂದು ಆ ಪತ್ರದಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ತಮಿಳುನಾಡಿಗೆ ಏನೆಲ್ಲ ಸ್ವೀಕಾರಾರ್ಹವೊ, ಅದನ್ನೆಲ್ಲ ಸ್ವೀಕರಿಸುತ್ತೇವೆ. ಅದಕ್ಕಿಂತ ಹೆಚ್ಚೂ ಇಲ್ಲ, ಅದಕ್ಕಿಂತ ಕಡಿಮೆಯೂ ಇಲ್ಲ. ವಾಸ್ತವಗಳನ್ನು ತಿರುಚುವುದನ್ನು ನಿಲ್ಲಿಸಿ” ಎಂದು ಅವರು ಆಗ್ರಹಿಸಿದ್ದಾರೆ.
“ತ್ರಿಭಾಷಾ ಸೂತ್ರ ವಿವಾದವು ತಮಿಳುನಾಡು ಸರಕಾರ ಪ್ರೇರಿತ ವಿವಾದವಾಗಿದ್ದು, ಈ ವಿಷಯದಲ್ಲಿ ಸಹಾನುಭೂತಿ ಪಡೆಯಲು ಹಾಗೂ ಡಿಎಂಕೆಯ ರಾಜಕೀಯ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು ಮುನ್ನೆಲೆಗೆ ತರಲಾಗಿದೆ” ಎಂದು ಮಂಗಳವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಕ್ಸ್ ನಲ್ಲಿ ಮಾಡಿದ್ದ ಪೋಸ್ಟ್ ಗೆ ಪ್ರತಿಯಾಗಿ ಕನಿಮೋಳಿಯವರಿಂದ ಈ ಹೇಳಿಕೆ ಹೊರ ಬಿದ್ದಿದೆ.