ಬಿಜೆಪಿ ಸಂಸದನ ನಿವಾಸದಲ್ಲಿ ಬಾಲಕನ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ (PTI)
ಸಿಲ್ಚಾರ್ (ಅಸ್ಸಾಂ): ಬಿಜೆಪಿ ಸಂಸದ ರಾಜ್ ದೀಪ್ ರಾಯ್ ನಿವಾಸದಲ್ಲಿ ಮನೆಗೆಲಸದ ಮಹಿಳೆಯೊಬ್ಬರ ಪುತ್ರನಾದ 10 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ. ಘಟನೆ ಅಸ್ಸಾಂ ರಾಜ್ಯದ ಕಾಚರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಕಾಚರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಬ್ರತಾ ಸೇನ್, ಕುತ್ತಿಗೆಯ ಸುತ್ತ ಬಟ್ಟೆ ಬಿಗಿದಿರುವ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕನ ತಾಯಿಯು ಬಿಜೆಪಿ ನಾಯಕನ ನಿವಾಸದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದರು, ಆಕೆ ಮೂಲತಃ ಧೋಲಾಯಿ ಪ್ರದೇಶದವರು ಎಂದು ಅವರು ಹೇಳಿದ್ದಾರೆ.
ಸುದ್ದಿ ತಿಳಿದ ತಕ್ಷಣ ಘಟನಾ ತಕ್ಷಣ ಸ್ಥಳಕ್ಕೆ ಧಾವಿಸಿದ ಸುಬ್ರತಾ ಸೇನ್, “ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಆದರೆ, ಘಟನೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಬಿಜೆಪಿ ಸಂಸದ ರಾಜ್ ದೀಪ್ ರಾಯ್, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಷ್ಟೇ ಹೇಳಿದ್ದಾರೆ.





