ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ | ಅಪ್ಪರ್ ಅಸ್ಸಾಮಿನಲ್ಲಿ ಬಾಂಗ್ಲಾದೇಶಿ - ವಿರೋಧಿ ಭಾವನೆ ಸೃಷ್ಟಿ

PC : PTI
ಗುವಾಹಟಿ : ನಾಗಾಂವ್ ಜಿಲ್ಲೆಯ ಧಿಂಗ್ ಪ್ರದೇಶದಲ್ಲಿ ಇತ್ತೀಚಿಗೆ 14 ಹರೆಯದ ಬಾಲಕಿಯ ಸಾಮೂಹಿಕ ಅತ್ಯಾಚಾರದ ಬಳಿಕ ಅಸ್ಸಾಮಿನ ವಿವಿಧೆಡೆಗಳಲ್ಲಿ ಬಾಂಗ್ಲಾದೇಶಿ-ವಿರೋಧಿ ಭಾವನೆಯು ಮಡುವುಗಟ್ಟುತ್ತಿದೆ.
ಸ್ಥಳೀಯ ಅಸ್ಮಿತೆಗೆ ಬೆದರಿಕೆಯಿದೆ ಎಂದು ಹೇಳಿರುವ ಶಿವಸಾಗರದ ಸ್ಥಳೀಯ ಸಂಘಟನೆಗಳ ಇಬ್ಬರು ನಾಯಕರು ಅಪ್ಪರ್ ಅಸ್ಸಾಂ ತೊರಯುವಂತೆ ‘ಎಲ್ಲ ಬಾಂಗ್ಲಾದೇಶಿಗಳಿಗೆ ’ಆದೇಶಿಸಿದ್ದಾರೆ.
ಅಪ್ಪರ್ ಅಸ್ಸಾಮಿನ ಆರು ಜಿಲ್ಲೆಗಳನ್ನು ತೊರೆಯುವಂತೆ ಅಥವಾ ಪರಿಣಾಮಗಳನ್ನು ಎದುರಿಸುವಂತೆ ಮುಸ್ಲಿಂ ಸಮುದಾಯದ ಒಂದು ವರ್ಗಕ್ಕೆ ಬೆದರಿಕೆಯೊಡ್ಡುತ್ತಿರುವ ಅಜ್ಞಾತ ಸಂಘಟನೆಗಳು ಮತ್ತು ಮೂಲಭೂತವಾದಿ ಗುಂಪುಗಳ ವಿರುದ್ಧ ಕ್ರಮವನ್ನು ಕೋರಿ ಪ್ರತಿಪಕ್ಷ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ಪತ್ರ ಬರೆದಿದೆ. ಇಂತಹ ಆದೇಶಗಳು ಕೋಮು ಸಾಮರಸ್ಯಕ್ಕೆ ಗಂಭೀರ ಬೆದರಿಕೆಯಾಗಿವೆ ಎಂದು ಅದು ಹೇಳಿದೆ.
ಪ್ರತೀಕಾರ ಕ್ರಮವಾಗಿ ಅಪ್ಪರ್ ಅಸ್ಸಾಮಿಗೆ ಪೂರೈಕೆಯ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲು ನಿರ್ಧರಿಸಿರುವ ನಾಗಾಂವ್ನ ಮೀನು ವ್ಯಾಪಾರಿಗಳು, ರಾಜ್ಯಾದ್ಯಂತದ ಜನರು ಖಂಡಿಸಿರುವ ಧಿಂಗ್ ಘಟನೆಗಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ವಿಷಾದಿಸಿದ್ದಾರೆ.
ಬಂಡುಕೋರ ಗುಂಪು ಉಲ್ಫಾದ ಮಾಜಿ ನಾಯಕ ಜಿತೇನ್ ದತ್ತಾ ಅವರು ಮೀನು ವ್ಯಾಪಾರಿಗಳ ನಿರ್ಧಾರವನ್ನು ಸ್ವಾಗತಿಸಿದ್ದು, ಅದನ್ನು ಹಿಂದೆಗೆದುಕೊಳ್ಳದಂತೆ ಕೇಳಿಕೊಂಡಿದ್ದಾರೆ.‘ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ವಿಷ ತಿನ್ನುವುದಕ್ಕಿಂತ ತಿನ್ನದಿರುವುದು ಮೇಲು. ನಾಗಾಂವ್ನ ಮೀನು ವ್ಯಾಪಾರಿಗಳು ಜನರ ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿಯನ್ನೂ ವಹಿಸದೆ ಅತಿಯಾಗಿ ಯೂರಿಯಾ ಬಳಸುತ್ತಾರೆ. ಇದನ್ನು ನಿಲ್ಲಿಸಲು ನಾವು ಬಯಸಿದ್ದೇವೆ ಮತ್ತು ಅಂತಹ ಮೀನುಗಳನ್ನು ತಿನ್ನದಂತೆ ಜನರಿಗೆ ಮೊದಲೇ ಮನವಿ ಮಾಡಿಕೊಂಡಿದ್ದೆವು’ ಎಂದು ಅವರು ಹೇಳಿದರು.
ಈಗಲೂ ಸಶಸ್ತ್ರ ಹೋರಾಟ ನಡೆಸುತ್ತಿರುವ ಪರೇಶ್ ಬರುವಾ ನೇತೃತ್ವದ ಉಲ್ಫಾ ಬಣವು ಇತ್ತಿಚಿನ ಅತ್ಯಾಚಾರ ಘಟನೆಗಳಿಗಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದನ್ನು ಖಂಡಿಸಿದೆ. ಇಂತಹ ಘಟನೆಗಳಲ್ಲಿ ವಿವಿಧ ಸಮುದಾಯಗಳ ವ್ಯಕ್ತಿಗಳು ಭಾಗಿಯಾಗುತ್ತಿರುವಾಗ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದು ಅನ್ಯಾಯ ಎಂದು ಅದು ಹೇಳಿದೆ.
ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಭಾಗಿಯಾಗಿದ್ದರು ಎನ್ನಲಾಗಿದೆ. ಈ ಪೈಕಿ ಬಂಧಿಸಲ್ಪಟ್ಟಿದ್ದ ತಫಝುಲ್ ಇಸ್ಲಾಮ್ ಎಂಬಾತ ಪೋಲಿಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.







