ಪಶ್ಚಿಮ ಬಂಗಾಳ | ಬಾಲಕನೋರ್ವನ ಮೃತದೇಹ ಪತ್ತೆ ಬಳಿಕ ಉದ್ವಿಗ್ನ : ಇಬ್ಬರನ್ನು ಥಳಿಸಿ ಹತ್ಯೆಗೈದ ಗುಂಪು

ಸಾಂದರ್ಭಿಕ ಚಿತ್ರ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಿಶ್ಚಿಂತಪುರ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಬಾಲಕನೋರ್ವನ ಮೃತದೇಹ ಪತ್ತೆಯಾದ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಗುಂಪೊಂದು ಇಬ್ಬರು ಸ್ಥಳೀಯರನ್ನು ಥಳಿಸಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಶನಿವಾರ ಬೆಳಿಗ್ಗೆ ಪಕ್ಕದ ನೀರಿನ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಬಾಲಕನ ಮೃತದೇಹವನ್ನು ಟಾರ್ಪಾಲಿನ್ ಸುತ್ತಿಡಲಾಗಿತ್ತು.
“ಬಾಲಕನನ್ನು ಸ್ಥಳೀಯನೋರ್ವ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಬಾಲಕನ ಕುಟುಂಬದ ಸದಸ್ಯರು ಸೇರಿದಂತೆ ಗುಂಪೊಂದು ಆತನ ಮನೆಗೆ ನುಗ್ಗಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದೆ. ಮನೆಯಲ್ಲಿದ್ದ ಇಬ್ಬರಿಗೆ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ" ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.





