ಬಿಟ್ಟು ಬಜರಂಗಿ ಸಹೋದರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ
ಫರೀದಾಬಾದ್: ನಕಲಿ ಗೋರಕ್ಷಕ ಬಿಟ್ಟು ಬಜರಂಗಿಯ ಕಿರಿಯ ಸಹೋದರ ಮಹೇಶ್ ಪಂಚಾಲ್ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಇಲ್ಲಿ ಬುಧವಾರ ನಡೆದಿದೆ.
ಗಂಭೀರ ಗಾಯಗೊಂಡಿರುವ ಮಹೇಶ್ ಪಂಚಾಲ್ ನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಫರೀದಾಬಾದ್ ನ ಬಾಬಾ ಮಂಡಿಯಲ್ಲಿರುವ ಚಾಚಾ ಚೌಕದಲ್ಲಿ ಮಹೇಶ್ ಪಂಚಾಲ್ ಮೇಲೆ ಐವರು ದುಷ್ಕರ್ಮಿಗಳ ಗುಂಪು ಬುಧವಾರ ರಾತ್ರಿ ದಾಳಿ ನಡೆಸಿದೆ. ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಪೊಲೀಸರ ತಂಡವೊಂದು ಮಹೇಶ್ ಪಂಚಾಲ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದೆ. ಈ ಸಂದರ್ಭ ಮಹೇಶ್ ಪಂಚಾಲ್, ದಾಳಿಕೋರರಲ್ಲಿ ಓರ್ವನನ್ನು ತಾನು ಗುರುತಿಸಬಲ್ಲೆ ಎಂದು ಹೇಳಿದ್ದಾರೆ. ಬಳಿಕ ಪೊಲೀಸರು ಶೋಧ ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.





