ಉತ್ತರಪ್ರದೇಶ ರಕ್ಷಣಾ ಕಾರಿಡಾರ್ ನಲ್ಲಿ ಕ್ಷಿಪಣಿ, ಡ್ರೋನ್ ನಿರ್ಮಾಣ: ರಾಜ್‌ನಾಥ್ ಸಿಂಗ್
ಉತ್ತರಪ್ರದೇಶ ರಕ್ಷಣಾ ಕಾರಿಡಾರ್ನಲ್ಲಿ ಶೀಘ್ರವೇ ಬ್ರಹ್ಮೋಸ್ ಕ್ಷಿಪಣಿಗಳು, ಡ್ರೋನ್ಗಳು ಮತ್ತು ಇಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ತಯಾರಿಸಲಾಗುವುದು ಅಥವಾ ಜೋಡಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.

ಹೊಸದಿಲ್ಲಿ, ಜೂ. 17: ಉತ್ತರಪ್ರದೇಶ ರಕ್ಷಣಾ ಕಾರಿಡಾರ್ನಲ್ಲಿ ಶೀಘ್ರವೇ ಬ್ರಹ್ಮೋಸ್ ಕ್ಷಿಪಣಿಗಳು, ಡ್ರೋನ್ಗಳು ಮತ್ತು ಇಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ತಯಾರಿಸಲಾಗುವುದು ಅಥವಾ ಜೋಡಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
‘‘ಉತ್ತರಪ್ರದೇಶ ರಕ್ಷಣಾ ಕಾರಿಡಾರ್ನಲ್ಲಿ ನಟ್ ಮತ್ತು ಬೋಲ್ಟ್ಗಳು ಅಥವಾ ಬಿಡಿಭಾಗಗಳನ್ನು ಮಾತ್ರ ತಯಾರಿಸುವುದಲ್ಲ, ಡ್ರೋನ್ಗಳು, ಯುಎವಿಗಳು, ಇಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ವಿಮಾನಗಳು ಮತ್ತು ಬ್ರಹ್ಮೋಸ್ ಕ್ಷಿಪಣಿಗಳನ್ನೂ ತಯಾರಿಸಲಾಗುವುದು ಮತ್ತು ಜೋಡಿಸಲಾಗುವುದು’’ ಎಂದು ಅವರು ಹೇಳಿದರು.
‘‘ಆತ್ಮನಿರ್ಭರ ಭಾರತ’’ಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ರಕ್ಷಣಾ ಸಚಿವರು ಮಾತನಾಡುತ್ತಿದ್ದರು.
ಉತ್ತರಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ (ಯುಪಿಡಿಐಸಿ) ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಭಾರತೀಯ ವಾಯುಯಾನ ಮತ್ತು ರಕ್ಷಣಾ ಕ್ಷೇತ್ರಗಳು ವಿದೇಶಿ ಪೂರೈಕೆದಾರರನ್ನು ಅವಲಂಬಿಸುವುದನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ.
ಉತ್ತರಪ್ರದೇಶ ಮತ್ತು ತಮಿಳುನಾಡುಗಳಲ್ಲಿರುವ ರಕ್ಷಣಾ ಕಾರಿಡಾರ್ಗಳ ಮೂಲಕ ರಕ್ಷಣಾ ಸಲಕರಣೆಗಳ ಉತ್ಪಾದನೆಗಾಗಿ ಪೂರಕ ಪರಿಸರವೊಂದನ್ನು ಸೃಷ್ಟಿಸಲಾಗಿದೆ ಎಂದು ರಾಜ್‌ನಾಥ್ ಹೇಳಿದರು.
ಈವರೆಗೆ ಯುಪಿಡಿಐಸಿಯಲ್ಲಿ ವಿವಿಧ ಕಂಪೆನಿಗಳು ಸುಮಾರು 2,500 ಕೋಟಿ ರೂ. ಹೂಡಿಕೆ ಮಾಡಿವೆ ಎಂದು ಸಚಿವರು ತಿಳಿಸಿದರು. ಕಾರಿಡಾರ್ ಅಭಿವೃದ್ಧಿಗಾಗಿ ಆಗ್ರಾ, ಅಲಿಗಢ, ಚಿತ್ರಕೂಟ, ಝಾನ್ಸಿ, ಕಾನ್ಪುರ ಮತ್ತು ಲಕ್ನೋ- ಈ ಆರು ಕೇಂದ್ರಗಳನ್ನು ಗುರುತಿಸಲಾಗಿದೆ.







