ಮಿಝೋರಾಂ | 75.82 ಕೋ.ರೂ. ಮೌಲ್ಯದ ಮಾದಕ ವಸ್ತು ವಶ ; 8 ಮಂದಿಯ ಬಂಧನ

PC : newindianexpress.com
ಗುವಾಹಟಿ, ಆ. 22: ಮಿಝೋರಾಂ ನಲ್ಲಿ ಗುರುವಾರ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 75.82 ಕೋ.ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ಐಜ್ವಾಲ್ ನ ಮಾದಕ ದ್ರವ್ಯ ನಿಯಂತ್ರಣ ಬ್ಯುರೊದೊಂದಿಗೆ ಗಡಿ ಭದ್ರತಾ ಪಡೆ (ಬಿಎಸ್ಎಫ್), ಮಿಝೋರಾಂ ನ ಅಬಕಾರಿ ಹಾಗೂ ಮಾದಕ ವಸ್ತು ಇಲಾಖೆ ಈ ಕಾರ್ಯಾಚರಣೆ ನಡೆಸಿತು.
ಜಂಟಿ ಕಾರ್ಯಾಚರಣೆ ತಂಡದ ಸದಸ್ಯರು ಗುರುವಾರ ಸಂಜೆ ಸುಮಾರು 4 ಗಂಟೆಗೆ ಐಜ್ವಾಲ್ನಿಂದ 60 ಕಿ.ಮೀ. ದೂರದಲ್ಲಿರುವ ಐಜ್ವಾಲ್-ಚಂಪೈ ರಸ್ತೆಯಲ್ಲಿರುವ ಕೈಫಾಂಗ್ ಹಾಗೂ ಸೆಲಿಂಗ್ ಗ್ರಾಮಗಳ ನಡುವೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿಯನ್ನು ಬಂಧಿಸಿತು.
ಅನಂತರ ಅವರರನ್ನು ದ್ವಿಚಕ್ರ ವಾಹನಗಳೊಂದಿಗೆ ಐಜ್ವಾಲ್ನಲ್ಲಿರುವ ಅಬಕಾರಿ ಹಾಗೂ ಮಾದಕ ದ್ರವ್ಯ ಇಲಾಖೆಯ ಕಚೇರಿಗೆ ಕರೆದುಕೊಂಡು ಬಂದಿತು. ತಪಾಸಣೆ ಸಂದರ್ಭ ಅವರಲ್ಲಿ 50 ಕಿ.ಗ್ರಾಂ. ಮೆಥಾಮ್ಫೆಟಾಮೈನ್ ಮಾತ್ರೆಗಳು ಹಾಗೂ ಮೂರು ಪೆಟ್ಟಿಗೆಗಳಲ್ಲಿ ಹೆರಾಯನ್ ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





