ಎಂಎಲ್ಎ ಹಾಸ್ಟೆಲ್ ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಪ್ರಕರಣ ದಾಖಲು

ಶಾಸಕ ಸಂಜಯ್ ಗಾಯಕ್ವಾಡ್ | PC : indiatoday.in
ಮುಂಬೈ: ಹಳಸಿದ ಆಹಾರ ಪೂರೈಸಿರುವುದಕ್ಕೆ ಸಂಬಂಧಿಸಿ ಎಂಎಲ್ಎ ಹಾಸ್ಟೆಲ್ ಕ್ಯಾಂಟೀನ್ನ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಚರ್ಚ್ಗೇಟ್ನಲ್ಲಿರುವ ಆಕಾಶವಾಣಿ ಎಂಎಲ್ಎ ಹಾಸ್ಟೆಲ್ನ ಸಿಬ್ಬಂದಿ ಯೋಗೇಶ್ ಕುಟ್ರನ್ ಅವರ ಕೆನ್ನೆಗೆ ಗಾಯಕ್ವಾಡ್ ಬಾರಿಸುತ್ತಿರುವುದು ಮಂಗಳವಾರ ಬೆಳಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಗಾಯಕ್ವಾಡ್ ಅವರು ಮಂಗಳವಾರ ರಾತ್ರಿ ಕ್ಯಾಂಟೀನ್ನಿಂದ ಊಟಕ್ಕೆ ಆರ್ಡರ್ ಮಾಡಿದ್ದರು. ಆದರೆ, ತನ್ನ ಕೊಠಡಿಗೆ ಪೂರೈಸಲಾದ ಅನ್ನ ಹಾಗೂ ಬೆಳೆ ಸಾರು ಹಳಸಿರುವುದು ಹಾಗೂ ದುರ್ವಾಸನೆ ಬರುತ್ತಿರುವುದು ಕಂಡು ಬಂತು. ಇದರಿಂದ ಆಕ್ರೋಶಿತರಾದ ಅವರು ಕ್ಯಾಂಟೀನ್ ಗೆ ನುಗ್ಗಿದರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಿಬ್ಬಂದಿಯ ಕೆನ್ನೆಗೆ ಬಾರಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಘಟನೆಯ ಬಳಿಕ ಗಾಯಕ್ವಾಡ್, ‘‘ಈ ಶೆಟ್ಟಿಗಳು ಬಹುಕಾಲದಿಂದ ನಮ್ಮ ಪ್ರಾಣದೊಂದಿಗೆ ಆಟವಾಡುತ್ತಿದ್ದಾರೆ. ಇಂದು ಅವರು ನನ್ನ ಪ್ರಾಣದೊಂದಿಗೆ ಆಟವಾಡಲು ಪ್ರಯತ್ನಿಸಿದರು. ನನ್ನ ಹೊಟ್ಟೆ ಸರಿ ಇಲ್ಲ. ನಾನು ಇದರಿಂದ ಕಳೆದ 20 ವರ್ಷಗಳಿಂದ ಬೇಸತ್ತಿದ್ದೇನೆ. ಸಣ್ಣದೊಂದು ತಪ್ಪು ಕೂಡ ನನಗೆ ಹೊಟ್ಟೆ ನೋವು ಉಂಟು ಮಾಡಬಹುದು’’ ಎಂದು ಅವರು ಹೇಳಿದ್ದರು.





