ಮೋದಿ ಸರಕಾರ ಬಡವರ ಬೆನ್ನಿಗೆ ಇರಿಯುತ್ತಿದೆ: MGNREGA ರದ್ದತಿಗೆ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಮಲ್ಲಿಕಾರ್ಜುನ ಖರ್ಗೆ , ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ತೀಕ್ಷ್ಣ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಸರಕಾರದ ದೂರದೃಷ್ಟಿ ಯೋಜನೆಯಾಗಿದ್ದ MGNREGA ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಬಡವರ ಬೆನ್ನಿಗೆ ಇರಿಯತ್ತಿದೆ” ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಮಲ್ಲಿಕಾರ್ಜುನ ಖರ್ಗೆ, ಮಹಾತ್ಮ ಗಾಂಧಿ ಹೆಸರಿನಲ್ಲಿ ಜಾರಿಗೆ ತಂದಿದ್ದ ಯೋಜನೆಯಿಂದಾಗಿ ಭಾರತದಲ್ಲಿನ ಸಂಪೂರ್ಣ ತಲೆಮಾರು ಬಡತನವನ್ನು ತಪ್ಪಿಸಿಕೊಂಡಿತ್ತು. ಆದರೆ, ಸೂಕ್ತ ಅಧ್ಯಯನ ಅಥವಾ ಮೌಲ್ಯಮಾಪನ ನಡೆಸದೆ, ರಾಜ್ಯಗಳನ್ನು ಸಂಪರ್ಕಿಸದೆ ಅಥವಾ ಪಕ್ಷಗಳನ್ನು ಸಂಪರ್ಕಿಸದೆ ನೂತನ ವಿಬಿ ರಾಮ್ ಜಿ ಕಾಯ್ದೆಯನ್ನು ಹೇರಲಾಗಿದೆ. ಇದು ಮೂರು ಕರಾಳ ಕೃಷಿ ಕಾಯ್ದೆಯಂತೆಯೇ ಇದೆ ಎಂದು ದೂರಿದರು.
“ಮೋದಿ ಸರಕಾರ ನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಕೋಟ್ಯಂತರ ಮಂದಿ ಬಡ ಮತ್ತು ದುರ್ಬಲರು ಅಸಹಾಯಕರಾಗುವಂತೆ ಮಾಡಿದೆ. ಬಡವರ ಹೊಟ್ಟೆಯ ಮೇಲೆ ಹೊಡೆದ ನಂತರ, ಇದೀಗ ಮೋದಿ ಸರಕಾರ ಅವರ ಬೆನ್ನಿಗೆ ಇರಿದಿದೆ. ನರೇಗಾ ಯೋಜನೆಯನ್ನು ರದ್ದುಗೊಳಿಸಿರುವುದು ರಾಷ್ಟ್ರಪತಿ ಮಹಾತ್ಮ ಗಾಂಧೀಜಿಗೆ ಮಾಡಿದ ಅವಮಾನವಾಗಿದೆ” ಎಂದು ಅವರು ಹರಿಹಾಯ್ದಿದ್ದಾರೆ.





