ಮೋದಿ ಸರಕಾರ ಶುದ್ಧ ಗಾಳಿ ಅಥವಾ ನೀರು ಒದಗಿಸುವಲ್ಲಿ ವಿಫಲವಾಗಿದೆ: ಖರ್ಗೆ

ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ, ಜ. 2: ಪ್ರಧಾನಿ ನರೇಂದ್ರ ಮೋದಿ ಅವರು ‘ಜಲಜೀವನ್ ಮಿಷನ್’ ಅನ್ನು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ ಸಂಭವಿಸಿದ ಸಾವಿನ ಕುರಿತು ಅವರು ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
ಮೋದಿ ಸರಕಾರ ಹಾಗೂ ಬಿಜೆಪಿ ದೇಶಕ್ಕೆ ಶುದ್ಧ ಗಾಳಿ ಅಥವಾ ಶುದ್ಧ ನೀರು ಒದಗಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಸತತ ಎಂಟು ಬಾರಿ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿ ಪಡೆದಿರುವ ಇಂದೋರ್ ನಗರದಲ್ಲಿ ಈ ಘಟನೆ ಸಂಭವಿಸಿರುವುದು ನಾಚಿಕೆಗೇಡಿನ ವಿಷಯ ಎಂದು ಖರ್ಗೆ ಹೇಳಿದ್ದಾರೆ. ಬಿಜೆಪಿಯ ಅಸಮರ್ಥತೆಯಿಂದಾಗಿ ಅಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಚಿವರನ್ನು ಪ್ರಶ್ನಿಸಿದರೆ ಅವರು ನಿಂದಿಸುತ್ತಾರೆ ಹಾಗೂ ಬೆದರಿಸುತ್ತಾರೆ. ಅಧಿಕಾರದ ಮದದಿಂದ ಬೀಗುತ್ತಿರುವ ಅವರು ಪತ್ರಕರ್ತರನ್ನೇ ದೂಷಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ ಸರಕಾರದ ದುರಾಡಳಿತವನ್ನು ಮುಚ್ಚಿ ಹಾಕಲು ಸಂಪೂರ್ಣ ಆಡಳಿತ ಯಂತ್ರ ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.





