ಭಾರತ - ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಟ್ರಂಪ್ ಘೋಷಿಸಿದಾಗಲೇ ಮೋದಿ ನೈತಿಕ ಬಲವನ್ನು ಕಳೆದುಕೊಂಡರು: ಕಾಂಗ್ರೆಸ್

ಅಶೋಕ್ ಗೆಹ್ಲೋಟ್ | PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ನೈತಿಕ ಬಲ ಕಳೆದುಕೊಂಡಿತು ಎಂದು ಮಂಗಳವಾರ ಆರೋಪಿಸಿರುವ ಕಾಂಗ್ರೆಸ್, ಈ ಹಿಂದೆ ದೇಶವು ಅಮೆರಿಕದ ಒತ್ತಡಕ್ಕೆ ಮಣಿಯದಿರುವಾಗ, ಈಗೇಕೆ ಅದು ಈಗಲೂ ಅಮೆರಿಕ ಅಧ್ಯಕ್ಷರ ಮಾತನ್ನು ಕೇಳುತ್ತಿದೆ ಎಂದೂ ಪ್ರಶ್ನಿಸಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ಪಾಕಿಸ್ತಾನವು ಮಣಿಯುವುದನ್ನು ಖಾತರಿಗೊಳಿಸುವಂತೆ ಭಾರತೀಯ ಸೇನಾ ಪಡೆಗಳು ಮೇಲುಗೈ ಸಾಧಿಸಿದ್ದ ವೇಳೆಯೇಕೆ ತರಾತುರಿಯಲ್ಲಿ ಕದನ ವಿರಾಮ ಘೋಷಿಸಲಾಯಿತು ಎಂದು ಪ್ರಶ್ನಿಸಿದರಲ್ಲದೆ, ಈ ಒಪ್ಪಂದದಲ್ಲಿ ಟ್ರಂಪ್ ಅವರ ಪಾತ್ರ, ವ್ಯಾಪಾರಕ್ಕೆ ಸಂಬಂಧಿಸಿದ ಬೆದರಿಕೆ ಹಾಗೂ ಅವರ ಪ್ರತಿಪಾದನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು ಎಂದೂ ಆಗ್ರಹಿಸಿದರು.
"ಕದನ ವಿರಾಮವನ್ನು ಘೋಷಿಸಿದ ರೀತಿಯಿಂದಲೇ ಈ ಸರಕಾರ ಆಡಳಿತ ನಡೆಸುವ ನೈತಿಕ ಬಲ ಮತ್ತು ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿಗೆ, ಸರಕಾರಕ್ಕೆ ಹಾಗೂ ದೇಶಕ್ಕೆ ಸುವರ್ಣಾವಕಾಶವಾಗಿತ್ತು. ಆದರೆ, ದಿಢೀರ್ ಕದನ ವಿರಾಮ ಘೋಷಣೆಯಿಂದ ಆ ಸುವರ್ಣಾವಕಾಶವನ್ನು ಕಳೆದುಕೊಳ್ಳಲಾಯಿತು" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
"ಸೋಮವಾರ ರಾತ್ರಿ ದೇಶವನ್ನುದ್ದೇಶಿಸಿ ಪ್ರಧಾನಿಗಳು ಮಾಡಿದ ಭಾಷಣ ಭಯೋತ್ಪಾದನೆ ಕುರಿತ ಭವಿಷ್ಯದ ನೀತಿ ಸೇರಿದಂತೆ ಹಲವು ಸಂಗತಿಗಳನ್ನು ವಿವರಿಸಿತು. ಮೋದಿ ಹಲವು ಒಳ್ಳೆಯ ಸಂಗತಿಗಳ ಕುರಿತು ಮಾತನಾಡಿದರು, ಭಯೋತ್ಪಾದನೆ ಹಾಗೂ ಅಣ್ವಸ್ತ್ರಗಳ ಬಗ್ಗೆ ಕೆಲವು ಭವಿಷ್ಯದ ಭರವಸೆಗಳನ್ನು ನೀಡಿದರು. ಎಲ್ಲವೂ ಚೆನ್ನಾಗಿತ್ತು. ಆದರೆ, ದಿಢೀರನೆ ಕದನ ವಿರಾಮ ಘೋಷಿಸಿದ್ದೇಕೆ ಎಂದು ಯಾರಿಗೂ ಅರ್ಥವಾಗಲಿಲ್ಲ" ಎಂದು ಅವರು ಛೇಡಿಸಿದರು.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಮೇ 7ರ ಮುಂಜಾನೆ ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಡಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ವಾಯು ದಾಳಿ ನಡೆಸಿ, ಕನಿಷ್ಠ ಒಂಭತ್ತು ಭಯೋತ್ಪಾದಕರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನಾ ಪಡೆ ಕೂಡಾ ಗಡಿಯಾಚೆಯಿಂದ ಶೆಲ್ ದಾಳಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. ಮೂರು ದಿನಗಳ ಕಾಲ ಉಭಯ ದೇಶಗಳ ನಡುವೆ ಉಲ್ಬಣಗೊಂಡಿದ್ದ ಸಂಘರ್ಷವು, ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 10ರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಕದನ ವಿರಾಮ ಒಪ್ಪಂದವೇರ್ಪಟ್ಟ ಬೆನ್ನಿಗೇ, ದಿಢೀರನೆ ಉಭಯ ದೇಶಗಳ ನಡುವಿನ ಸಂಘರ್ಷ ತಿಳಿಯಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವೇರ್ಪಡಲು ಅಮೆರಿಕದ ಮಧ್ಯಸ್ಥಿಕೆ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸುತ್ತಿದ್ದಂತೆಯೇ, ಈ ದಿಢೀರ್ ಕದನ ವಿರಾಮದ ಕುರಿತು ರಾಜಕೀಯ ವಲಯದಲ್ಲಿ ಕೆಸರೆರಚಾಟ ಪ್ರಾರಂಭವಾಗಿದೆ. ಅದರಲ್ಲೂ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಭಾರತೀಯ ಸೇನಾ ಪಡೆಗಳು ಮೇಲುಗೈ ಸಾಧಿಸಿದ್ದ ಹೊತ್ತಿನಲ್ಲಿ ದಿಢೀರನೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದರಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.







