National Herald ಪ್ರಕರಣದಲ್ಲಿ ಸೋನಿಯಾ ಗಾಂಧಿಗೆ ರಿಲೀಫ್: ಮೋದಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್

Photo credit: PTI
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರನ್ನು ಪರಿಗಣಿಸಲು ದಿಲ್ಲಿ ನ್ಯಾಯಾಲಯ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಅವರ ವಿರುದ್ಧ ಹೋರಾಡುತ್ತಲೇ ಇರುತ್ತೇವೆ. ಅವರಿಗೆ ಪಾಠ ಕಲಿಸುತ್ತೇವೆ" ಎಂದು ಹೇಳಿದರು.
"ಈ ತೀರ್ಪಿನ ನಂತರ ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು. ಏಕೆಂದರೆ ಅದು ಅವರ ಮುಖಕ್ಕೆ ಬಾರಿಸಿದಂತಿದೆ. ಅವರು ರಾಜೀನಾಮೆ ನೀಡಬೇಕು. ಅವರು ಈ ರೀತಿ ಜನರಿಗೆ ಕಿರುಕುಳವನ್ನು ನೀಡಬಾರದು. ಅವರು ಈ ರೀತಿ ಮಾಡಿದರೆ ಜನರು ಅದನ್ನು ಸಹಿಸುವುದಿಲ್ಲ ಎಂದು ತಿಳಿದಿರಬೇಕು" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಕೆ.ಸಿ ವೇಣುಗೋಪಾಲ್, ಮೋದಿ ಸರಕಾರದ ರಾಜಕೀಯ ಪಿತೂರಿಯನ್ನು ಕಾಂಗ್ರೆಸ್ ಬಹಿರಂಗಪಡಿಸಲಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ಸಿಂಘ್ವಿ, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಉಪಸ್ಥಿತರಿದ್ದರು.







