ಭಾರತದ ಚುನಾವಣಾ ಆಯೋಗವು ʼಮೋದಿ-ಶಾ ಚುನಾವಣಾ ಆಯೋಗʼವಾಗಿದೆ: ಸಂಜಯ್ ರಾವುತ್

Photo: PTI
ಹೊಸದಿಲ್ಲಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಣ ನಿಜವಾದ ಎನ್ಸಿಪಿ ಎಂದು ಪರಿಗಣಿಸುವ ನಿರ್ಧಾರದ ಮೂಲಕ ಚುನಾವಣಾ ಆಯೋಗ ಪ್ರಜಾಪ್ರಭುತ್ವಕ್ಕೆ ಹಿಂದಿನಿಂದ ಇರಿದಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಬುಧವಾರ ಆರೋಪಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ರಾವುತ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಸ್ಥಾಪಕ ಶರದ್ ಪವಾರ್ ಹಾಗೂ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಸಂಭವಿಸಿದ ರೀತಿಯ ಅನ್ಯಾಯ ಇತಿಹಾಸದಲ್ಲಿ ಕಂಡಿಲ್ಲ ಎಂದಿದ್ದಾರೆ.
ಭಾರತದ ಚುನಾವಣಾ ಆಯೋಗ ಮೋದಿ-ಶಾ ಚುನಾವಣಾ ಆಯೋಗವಾಗಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
‘‘..ಇದು ಇನ್ನು ಭಾರತದ ಚುನಾವಣಾ ಆಯೋಗ ಅಲ್ಲ. ಬದಲಾಗಿ ಮೋದಿ-ಅಮಿತ್ ಶಾ ಚುನಾವಣಾ ಆಯೋಗ. ಇದು ಶಿವಸೇನೆಗೆ ಅನುಭವಕ್ಕೆ ಬಂದಿದೆ’’ ಎಂದು ರಾವುತ್ ಹೇಳಿದ್ದಾರೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ನೀಡಿರುವ ಆದೇಶ ಪ್ರಶ್ನಿಸಿ ಶರದ್ ಪವಾರ್ ಬಣ ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ ಅಜಿತ್ ಪವಾರ್ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಚುನಾವಣಾ ಆಯೋಗದ ಆದೇಶವನ್ನು ಶರದ್ ಪವಾರ್ ಬಣ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಜಿತ್ ಬಣ ಕೇವಿಯಟ್ ಸಲ್ಲಿಸಿದೆ.







