ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ಜಾರ್ಖಂಡ್ ಹೈಕೋರ್ಟ್

Rahul Gandhi | Photo : PTI
ರಾಂಚಿ: ಜಾರ್ಖಂಡ್ ಉಚ್ಚ ನ್ಯಾಯಾಲಯವು ಮೋದಿ ಉಪನಾಮ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿಯನ್ನು ನೀಡಿದೆ.
ರಾಹುಲ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆಯೂ ನ್ಯಾ.ಎಸ್.ಕೆ.ದ್ವಿವೇದಿ ಅವರು ಮಂಗಳವಾರ ತನ್ನ ಆದೇಶದಲ್ಲಿ ತಾಕೀತು ಮಾಡಿದ್ದಾರೆ.
ಮಾನಹಾನಿ ಪ್ರಕರಣದಲ್ಲಿ ಖುದ್ದಾಗಿ ಹಾಜರಾಗುವಂತೆ ರಾಂಚಿಯ ಎಂಪಿ-ಎಂಎಲ್ಎ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಆ.16ರಂದು ಪ್ರಕರಣದ ವಿಚಾರಣೆ ನಡೆಯಲಿದೆ. 2019, ಎಪ್ರಿಲ್ ನಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ‘ಎಲ್ಲ ಕಳ್ಳರೂ ಮೋದಿ ಉಪನಾಮವನ್ನು ಹೊಂದಿರುವುದು ಹೇಗೆ? ’ಎಂಬ ರಾಹುಲ್ ಹೇಳಿಕೆಯ ವಿರುದ್ಧ ಪ್ರದೀಪ್ ಮೋದಿ ಎನ್ನುವವರು ಈ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಹಿಂದೆ ಇಂತಹುದೇ ಪ್ರಕರಣದಲ್ಲಿ ರಾಹುಲ್ ರನ್ನು ತಪ್ಪಿತಸ್ಥ ಎಂದು ಮಾ.23ರಂದು ಘೋಷಿಸಿದ್ದ ಸೂರತ್ನ ಮಹಾನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಇದು ರಾಹುಲ್ ತನ್ನ ವಯನಾಡು ಸಂಸದ ಸ್ಥಾನದಿಂದ ಅನರ್ಹಗೊಳ್ಳಲು ಕಾರಣವಾಗಿತ್ತು.
ತನ್ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಸೂರತ್ ನ್ಯಾಯಾಲಯವು ರಾಹುಲ್ ರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿತ್ತು.







