ಶ್ವೇತಭವನದಲ್ಲಿ ಮೋದಿ-ಟ್ರಂಪ್ ಮಾತುಕತೆ | ಭಾರತ-ಅಮೆರಿಕ 500 ಬಿಲಿಯ ಡಾಲರ್ ವ್ಯಾಪಾರದ ಗುರಿ
►ಈ ವರ್ಷದೊಳಗೆ ಬೃಹತ್ ವಾಣಿಜ್ಯ ಒಪ್ಪಂದಕ್ಕೆ ಉಭಯ ನಾಯಕರ ನಿರ್ಧಾರ ►ರಕ್ಷಣೆ, ವಾಣಿಜ್ಯ ಇಂಧನ ಮತ್ತಿತರ ಕ್ಷೇತ್ರಗಳಲ್ಲಿ ಸಹಕಾರ ಬಲವರ್ಧನೆಗೆ ನಿರ್ಧಾರ ►ಅಮೆರಿಕದಿಂದ ಎಫ್-35 ಫೈಟರ್ಜೆಟ್, ಯುದ್ಧಸಾಮಾಗ್ರಿ, ತೈಲ, ಇಂಧನ ಖರೀದಿಗೆ ಭಾರತ ಸಮ್ಮತಿ ►2030ರೊಳಗೆ ಉಭಯ ದೇಶಗಳ ವಾಣಿಜ್ಯ ವ್ಯವಹಾರಗಳನ್ನು ಎರಡು ಪಟ್ಟು ಹೆಚ್ಚಿಸಲು ಕ್ರಮ

Photo credit: X/@narendramodi
ಹೊಸದಿಲ್ಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸೋಮವಾರ ಮಹತ್ವದ ಮಾತುಕತೆ ನಡೆಸಿದ್ದು ರಕ್ಷಣೆ,ವಾಣಿಜ್ಯ, ಇಂಧನ , ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯದೇಶಗಳ ನಡುವಿನ ಸಹಕಾರವನ್ನು ಬಲಪಡಿಸುವ ಬಗ್ಗೆ ಗಾಢವಾಗಿ ಚರ್ಚಿಸಿದ್ದಾರೆ.
2030ರೊಳಗೆ ಭಾರತ-ಅಮೆರಿಕಗಳ ನಡುವಿನ ವಾಣಿಜ್ಯ ವ್ಯವಹಾರಗಳನ್ನು ಸುಮಾರು 500 ಶತಕೋಟಿ ಡಾಲರ್ಗೆ (43,39,600 ಕೋಟಿ ರೂ.) ಹೆಚ್ಚಿಸುವ ಗುರಿಯನ್ನು ಸಾಧಿಸಲು ಉಭಯ ನಾಯಕರು ನಿರ್ಧರಿಸಿದ್ದಾರೆ.
ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ಜೊತೆ ವಿಸ್ತೃತ ಮಾತುಕತೆ ನಡೆಸಿದ ಮೋದಿ ಅವರು ರಕ್ಷಣೆ, ವಾಣಿಜ್ಯ, ತಂತ್ರಜ್ಞಾನ ಹಾಗೂ ಇಂಧನ ಸೇರಿದಂತೆ ವಿವಿಧ ವಲಯಗಳಲ್ಲಿ ಉಭಯದೇಶಗಳ ನಡುವೆ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು.
ಭಾರತವು ಅಮೆರಿಕದಿಂದ ಅಧಿಕ ಪ್ರಮಾಣದಲ್ಲಿ ತೈಲ, ಅನಿಲ ಹಾಗೂ ಎಫ್-35 ಫೈಟರ್ ಜೆಟ್ಗಳು ಸೇರಿದಂತೆ ಮಿಲಿಟರಿ ಹಾರ್ಡ್ವೇರ್ಗಳನ್ನು ಖರೀದಿಸಲಿದೆ. ಆ ಮೂಲಕ ಅಮೆರಿಕದ ವಾಣಿಜ್ಯ ಕೊರತೆಯನ್ನು ತಗ್ಗಿಸಲಿದೆ ಎಂದು ಟ್ರಂಪ್ ಘೋಷಿಸಿದರು. ಆದಾಗ್ಯೂ ಪರಸ್ಪರ ಕೊಡುಕೊಳ್ಳುವಿಕೆ ಸುಂಕ ಹೇರಿಕೆಯ ವ್ಯವಸ್ಥೆಯನ್ನು ಭಾರತಕ್ಕೆ ರಿಯಾಯಿತಿ ನೀಡುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತವು ಅಮೆರಿಕದ ಉತ್ಪನ್ನಗಳಿಗೆ ಸುಂಕವಿಧಿಸುವಷ್ಟೇ ಪ್ರಮಾಣದಲ್ಲಿ ನಾವು ಅವರಿಗೆ ಸುಂಕವನ್ನು ವಿಧಿಸುತ್ತೇವೆ ಎಂದು ಹೇಳುವ ಮೂಲಕ ಭಾರತದ ಜೊತೆಗಿನ ವಾಣಿಜ್ಯ ವ್ಯವಹಾರದಲ್ಲಿ ಬಿಗಿನಿಲುವನ್ನು ಮಂದುವರಿಸುವ ಸುಳಿವು ನೀಡಿದ್ದಾರೆ.
ಶ್ವೇತಭವನದ ಓವಲ್ ಕಚೇರಿಗೆ ಮಾತುಕತೆಗೆ ಆಗಮಿಸಿದ ಮೋದಿ ಅವರನ್ನು ಟ್ರಂಪ್ ಹಸ್ತಲಾಘವ ನೀಡಿ ಆಲಿಂಗಿಸಿ ಬರಮಾಡಿಕೊಂಜರು. ತನ್ನ ದೀರ್ಘಾವಧಿಯ ಸ್ನೇಹಿತನೆಂದು ಮೋದಿಯನ್ನು ಅವರು ಬಣ್ಣಿಸಿದರು.
ರಕ್ಷಣೆ, ಹೂಡಿಕೆ,ವ್ಯಾಪಾರ , ಇಂಧನ, ನಾವೀನ್ಯತೆ ಹಾಗೂ ಬಹುಪಕ್ಷೀಯ ಪಾಲುದಾರಿಕೆಯಲ್ಲಿ ಭಾರೀ ಪರಿವರ್ತನೆಯನ್ನು ತರುವ ‘ಕ್ಯಾಂಪಾಕ್ಟ್’ಎಂಬ ನೂತನ ಉಪಕ್ರಮವನ್ನು ಪ್ರಧಾನಿ ಮೋದಿ ಹಾಗೂ ಟ್ರಂಪ್ ಘೋಷಿಸಿದ್ದಾರೆ.
ಈ ಉಪಕ್ರಮವು ಉಭಯದೇಶಗಳ ನಡುವಿನ ಸಹಕಾರದಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದೆ ಎಂದವರು ಹೇಳಿದ್ದಾರೆ.
ಆನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ ಹಾಗೂ ಟ್ರಂಪ್ ಅವರು ಅಮೆರಿಕದ ವಾಣಿಜ್ಯ ಕೊರತೆಯನ್ನು ಕಡಿಮೆಗೊಳಿಸಲು ಭಾರತವು ಅಮೆರಿಕದಿಂದ ಅಧಿಕ ಪ್ರಮಾಣದಲ್ಲಿ ತೈಲ ಹಾಗೂ ಅನಿಲವನ್ನು ಆಮದುಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವ ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ತಾನು ಹಾಗೂ ಮೋದಿ ಸಮ್ಮತಿಸಿರುವುದಾಗಿ ಟ್ರಂಪ್ ಹೇಳಿದರು.
ಉಭಯದೇಶಗಳ ನಡುವಿನ ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಉಭಯನಾಯಕರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ನ್ಯಾಯಸಮ್ಮತೆ, ರಾಷ್ಟ್ರೀಯ ಭದ್ರತೆ ಹಾಗೂ ಉದ್ಯೋಗ ಸೃಷ್ಟಿಯನ್ನು ಖಾತರಿಪಡಿಸುವಂತಹ ಅಭಿವೃದ್ಧಿಯನ್ನು ಉತ್ತೇಜಿಸಲು ಅಮೆರಿಕ-ಭಾರತ ವಾಣಿಜ್ಯ ಸಂಬಂಧವನ್ನು ಗಾಢವಾಗಿಸಲು ಉಭಯ ನಾಯಕರು ದೃಢ ನಿರ್ಧಾರವನ್ನು ಕೈಗೊಂಡರು.
2030ರೊಳಗೆ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರವನ್ನು ಎರಡು ಪಟ್ಟು ಹೆಚ್ಚಿಸುವ ಮಿಶನ್ 500 ಗುರಿಯನ್ನು ಕೂಡಾ ಅವರು ನಿಗದಿಪಡಿಸಿದ್ದಾರೆ.
ಅಮೆರಿಕದಲ್ಲಿ ಉತ್ಪಾದನೆಯಾದ ಮೋಟಾರ್ ಸೈಕಲ್ಗಳು, ಮಾಹಿತಿ ಹಾಗೂ ತಂತ್ರಜ್ಡಾನ ಉತ್ಪನ್ನಗಳು , ಲೋಹಗಳ ಮೇಲಿನ ಸುಂಕವನ್ನು ಕಡಿಮೆಗೊಳಿಸಿರುವ ಭಾರತದ ಕ್ರಮವನ್ನು ಅಮೆರಿಕ ಸ್ವಾಗತಿಸಿದೆ. ಅಷ್ಟೇ ಅಲ್ಲದೆ ಬಾತುಕೋಳಿ ಮಾಂಸ, ವೈದ್ಯಕೀಯ ಉಪಕರಣಗಳು ಮತ್ತಿತರ ಅಮೆರಿಕದ ಕೃಷಿ ಸಂಬಂಧಿತ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆಯನ್ನು ಹೆಚ್ಚಿಸಲು ಅವಕಾಶ ನೀಡಿರುವುದನ್ನು ಕೂಡಾ ಅದು ಸ್ವಾಗತಿಸಿದೆ.
ಇದೇ ವೇಳೆ ಭಾರತದ ಮಾವು ಹಾಗೂ ದಾಳಿಂಬೆಯ ರಫ್ತನ್ನ ಹೆಚ್ಚಿಸಲು ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ಭಾರತವು ಸ್ವಾಗತಿಸಿದೆ.
ಅಧ್ಯಕ್ಷರಾಗಿ ಟ್ರಂಪ್ ಎರಡನೆ ಭಾರೀ ಅಧಿಕಾರ ವಹಿಸಿದ ಬಳಿಕ ಮೋದಿ ಅವರು ಅಮೆರಿಕಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.







