ಮೋದಿಗೆ 75 ತುಂಬಿದ ಬಳಿಕ ಗಡ್ಕರಿ ಪ್ರಧಾನಿಯಾಗಲಿ; ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಗೆ ರೈತ ನಾಯಕ ಕಿಶೋರ್ ತಿವಾರಿ ಪತ್ರ

ಮೋಹನ್ ಭಾಗವತ್ , ನರೇಂದ್ರ ಮೋದಿ | PTI
ಮುಂಬೈ,ಆ.20: ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಿದ ಬಳಿಕ ಅವರ ಉತ್ತರಾಧಿಕಾರಿಯಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನೇಮಿಸಬೇಕೆಂದು ಹಿರಿಯ ರೈತ ನಾಯಕ ಹಾಗೂ ವಿದರ್ಭ ಜನಾಂದೋಲನ ಸಮಿತಿಯ ಸಂಸ್ಥಾಪಕ ಕಿಶೋರ್ ತಿವಾರಿ ಅವರು ಆಗ್ರಹಿಸಿದ್ದಾರೆ.
ಗಡ್ಕರಿ ‘ಅಜಾತಶತ್ರು’ವಾಗಿದ್ದು, ಎಲ್ಲರ ಮನ್ನಣೆ ಗಳಿಸಿದ್ದಾರೆಂದು ಅವರು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರಿಗೆ ಇತ್ತೀಚೆಗೆ ಬರೆದಿರುವ ಪತ್ರವೊಂದರಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಸೆಪ್ಟೆಂಬರ್ 17ರಂದು 75 ವರ್ಷ ಪೂರ್ಣಗೊಳಿಸಲಿದ್ದಾರೆ. ಪ್ರಧಾನಿ ಹುದ್ದೆಗೆ ಗಡ್ಕರಿ ಆಯ್ಕೆಯಾಗಬೇಕೆಂದು ತಿವಾರಿ ಆಗ್ರಹಿಸುತ್ತಿರುವುದು ಇದು ಎರಡನೇ ಸಲವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಚತ್ತೀಸ್ ಗಡ ರಾಜ್ಯಗಳಲ್ಲಿ ಪರಾಭವಗೊಂಡಾಗಲೂ ಕೂಡಾ ತಿವಾರಿ ಅವರು ಪ್ರಧಾನಿ ಹುದ್ದೆಗೆ ನಿತಿನ್ ಸೂಕ್ತ ವ್ಯಕ್ತಿಯೆಂದು ಹೇಳಿದ್ದರು.
ದೇಶವು ನರೇಂದ್ರ ಮೋದಿಯವರಿಗೆ ಪ್ರಧಾನಿಯಾಗಿ 11 ವರ್ಷಗಳ ಕಾಲ ಸೇವೆ ಸಲ್ಲಿಸುವ ಅಪೂರ್ವ ಅವಕಾಶವನ್ನು ನೀಡಿದೆ. ಮೋದಿ ಅವರು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವಾರು ಉತ್ತೇಜನಕಾರಿ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಆದುದರಿಂದ 2029ರ ಲೋಕಸಭಾ ಚುನಾವಣೆಗೆ ಮೊದಲು ಉಳಿದ ನಾಲ್ಕು ವರ್ಷಗಳಿಗೆ ಗಡ್ಕರಿಯವರಿಗೆ ದೇಶವನ್ನು ಮುನ್ನಡೆಸುವ ಅವಕಾಶವನ್ನು ನೀಡಬೇಕೆಂದು ತಿವಾರಿ ಅವರು ಭಾಗವತ್ ಆವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಗಡ್ಕರಿ ನೇತೃತ್ವದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಅಗತ್ಯವಿದೆ ಎಂದವರು ಹೇಳಿದ್ದಾರೆ. 2008ರಿಂದ 2012ರವರೆಗೆ ಬಿಜೆಪಿ ಅಧ್ಯಕ್ಷರಾಗಿ ಗಡ್ಕರಿಯವರ ಪರಿಶ್ರಮದ ಫಲವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರವು ಬದಲಾಯಿತು. ಗಡ್ಕರಿಯವರು ಪ್ರಧಾನಿಯಾಗುವ ಸಾಧ್ಯತೆಯಿದೆಯೆಂದು 2012ರಲ್ಲಿ ನಂಬಲಾಗಿತ್ತು. ಆದರೆ ಅವರು ಪಕ್ಷದ ಅಧ್ಯಕ್ಷನಾಗುವುದನ್ನು ತಡೆಯಲು ಆಧಾರರಹಿತ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ ಎಂದು ತಿವಾರಿ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಗಡ್ಕರಿ ಅವರು ಆರೆಸ್ಸೆಸ್ ಸಿದ್ಧಾಂತಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅವರ ಸೇವಾ ತತ್ಪರತೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ದಕ್ಷತೆಯು ಸಾರ್ವತ್ರಿಕ ಮನ್ನಣೆಯನ್ನು ಗಳಿಸಿದೆ. ಇದೀಗ ಹಾಲಿ ಪ್ರಧಾನಿಯವರನ್ನು ನಿವೃತ್ತಿಗೊಳಿಸಲು ತನ್ನ ಸೂಪರ್ ವೀಟೋ ಅಧಿಕಾರವನ್ನು ಚಲಾಯಿಸುವ ಸಮಯ ಆರೆಸ್ಸೆಸ್ ಗೆ ಬಂದಿದೆ ಎಂದು ತಿವಾರಿ ಪತ್ರದಲ್ಲಿ ಬರೆದಿದ್ದಾರೆ.
68 ವರ್ಷದ ಗಡ್ಕರಿ ಅವರು ನಾಗಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿದ್ದಾರೆ ಮತ್ತು ಆರೆಸ್ಸೆಸ್ ಜೊತೆ ನಿಕಟಬಾಂಧವ್ಯವನ್ನು ಹೊಂದಿದ್ದಾರೆ.
ಮಹಾರಾಷ್ಟ್ರ ಸರಕಾರದ ವಸಂತರಾವ್ ನಾಯ್ಕ್ ಶೇಟಿ ಸ್ವಾವಂಲಬನ್ ಮಿಶನ್ ನ ಮಾಜಿ ಅಧ್ಯಕ್ಷರಾದ ತಿವಾರಿ ಅವರು ಬಿಜೆಪಿಯ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಬಳಿಕ ಶಿವಸೇನಾಗೆ ಸೇರ್ಪಡೆಯಾಗಿದ್ದರು







