ಅಮೆರಿಕದ ಸುಂಕವನ್ನು ವ್ಯಂಗ್ಯವಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಮೋಹನ್ ಭಾಗವತ್ | PC : PTI
ಹೊಸದಿಲ್ಲಿ: ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಹೇರಿರುವ ಅತ್ಯಧಿಕ ಶೇ. 50ರಷ್ಟು ಸುಂಕದ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಭಾರತದ ಬೆಳವಣಿಗೆಯಿಂದ ಭಯಭೀತಗೊಂಡಿರುವ ಡೊನಾಲ್ಡ್ ಟ್ರಂಪ್ ಆಡಳಿತ ಇಂತಹ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ನಾಗಪುರದಲ್ಲಿ ಆಯೋಜನೆಗೊಂಡಿದ್ದ ಯೋಗ ಹಾಗೂ ಆಧ್ಯಾತ್ಮಿಕ ತರಬೇತಿ ಕೇಂದ್ರ ಬ್ರಹ್ಮ ಕುಮಾರೀಸ್ ವಿಶ್ವ ಶಾಂತಿ ಸರೋವರ್ ನ 7ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಒಂದು ವೇಳೆ ಭಾರತವೇನಾದರೂ ಬಲಿಷ್ಠವಾಗಿ ಬೆಳೆದರೆ, ನಮಗೇನಾಗುತ್ತದೊ ಹಾಗೂ ನಮ್ಮ ಸ್ಥಾನ ಎಲ್ಲಿರುತ್ತದೊ ಎಂದು ಜಗತ್ತಿನ ಕೆಲವು ಮಂದಿ ಭಯಭೀತರಾಗಿದ್ದಾರೆ. ಇದೇ ಕಾರಣಕ್ಕೆ ಭಾರತದ ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗಿದೆ” ಎಂದು ಹೇಳಿದ್ದಾರೆ.
ಜನರ ಮನಸ್ಥಿತಿಯನ್ನು ‘ನಾನು’ವಿನಿಂದ ‘ನಮ್ಮ’ಗೆ ಬದಲಾಯಿಸುವುದರಿಂದ ಹಲವಾರು ಬದಲಾವಣೆಗಳನ್ನು ತರಬಹುದು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.
“ಜಗತ್ತು ತನ್ನ ಅಪೂರ್ಣ ದೃಷ್ಟಿಕೋನದ ಕಾರಣಕ್ಕೆ ದಾರಿ ಕಾಣದಾಗಿರುವುದರಿಂದ, ಪರಿಹಾರಕ್ಕಾಗಿ ಎದುರು ನೋಡುತ್ತಿದೆ. ಆದರೆ, ಅವರ ‘ನಾನು ಮಾತ್ರ’ ಎಂಬ ಧೋರಣೆಯ ಕಾರಣಕ್ಕೆ ಇದು ಅಸಾಧ್ಯವಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ತಿಂಗಳು ಭಾರತದ ಉತ್ಪನ್ನಗಳ ಮೇಲಿನ ಮೂಲ ಸುಂಕವನ್ನು ಶೇ. 25ಕ್ಕೆ ಪರಿಷ್ಕರಣೆಗೊಳಿಸಿದ್ದ ಡೊನಾಲ್ಡ್ ಟ್ರಂಪ್ ಆಡಳಿತ, ರಶ್ಯತದಿಂದ ತೈಲ ಖರೀದಿಸುತ್ತಿರುವ ಕಾರಣಕ್ಕೆ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನೂ ವಿಧಿಸಿತ್ತು. ರಶ್ಯದಿಂದ ತೈಲವನ್ನು ಖರೀದಿಸುವ ಮೂಲಕ ಭಾರತ ಉಕ್ರೇನ್ ಮೇಲಿನ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ನೆರವು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು.
ಆದರೆ, ಭಾರತ ಈ ಸುಂಕವನ್ನು ಅನ್ಯಾಯ, ಅಸಮರ್ಥನೀಯ ಹಾಗೂ ಅಕಾರಣ ಎಂದು ಖಂಡಿಸಿತ್ತು. ಅಲ್ಲದೆ, ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಘೋಷಿಸಿತ್ತು.







